

ಮೈಸೂರು: ಸಾಮಾಜಿಕ ಕಳಕಳಿ ಹೊಂದಿದ್ದ ರಾಜಕೀಯ ಮುತ್ಸದ್ದಿ ಡಾ.ಬಾಬು ಜಗಜೀವನರಾಮ್ ಅವರಿಗೆ ಪ್ರಧಾನಿ ಹುದ್ದೆಯನ್ನು ತಪ್ಪಿಸುವ ಮೂಲಕ ಅಪಪ್ರಚಾರ ಮಾಡಲಾಯಿತು ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಮ್ ಅವರ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಬೂಜಿ ಅವರಿಗೆ ಪ್ರಧಾನಿಯಾಗುವ ಅವಕಾಶ ದೊರೆತಿತ್ತು. ಆದರೆ ಅಪಪ್ರಚಾರ ಮಾಡಿ ಆ ಹುದ್ದೆಯನ್ನು ತಪ್ಪಿಸಿ ಉಪ ಪ್ರಧಾನಿಯಾಗಿ ಮಾಡಲಾಯಿತು ಎಂದರು.
ಡಾ. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿಯಲ್ಲಿ ಬಾಬೂಜಿ ಸಹ ಇದ್ದರು. ಬಳಿಕ ಸಂಸದೀಯ ಪಟುವಾಗಿ ಅದನ್ನು ಜಾರಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರು. ಕಾರ್ಮಿಕ ಸಚಿವರಾಗಿ ಕನಿಷ್ಠ ವೇತನ, 8ಗಂಟೆ ಕೆಲಸದ ಅವಧಿ ನಿಗದಿ, ವಿಮೆ, ಇಎಸ್‌ಐ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಅನುಷ್ಠಾನಕ್ಕೆ ತಂದು ಕಾರ್ಮಿಕರ ಕಲ್ಯಾಣಕ್ಕೆ ಶ್ರಮಿಸಿದರು. ಅವರು ತಂದಿರುವ ಕಾಯ್ದೆಗಳು ಈಗಲೂ ಇವೆ ಎಂದರು.
ಅವರು ರೈಲ್ವೆ ಸಚಿವರಾಗಿ ದೇಶಾದ್ಯಂತ ಸಾವಿರಾರು ಕಿ.ಮೀ. ರೈಲು ಸಂಪರ್ಕವನ್ನು ವಿಸ್ತರಣೆ ಮಾಡಿದರು. ರೈಲ್ವೆ ಕ್ಯಾಂಟೀನ್‌ನಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಅವಕಾಶ ಕಲ್ಪಿಸಿ ಕೆಲಸ ನಿರ್ವಹಿಸಲು ಅವಕಾಶ ಕೊಟ್ಟರು. ರಕ್ಷಣಾ ಸಚಿವರಾಗಿ ಬಾಂಗ್ಲಾ ವಿಮೋಚನೆ ಮಾಡಿ ಹೊಸ ರಾಷ್ಟ್ರ ನಿರ್ಮಾಣಕ್ಕೆ ಕಾರಣರಾದರು. ಜತೆಗೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದರು ಎಂದು ಸ್ಮರಿಸಿದರು.
ಕೃಷಿ ಸಚಿವರಾಗಿ ಹಸಿರುಕ್ರಾಂತಿಗೆ ನಾಂದಿ ಹಾಡಿದರು. ಕೃಷಿ ಕ್ಷೇತ್ರವನ್ನು ಸುಧಾರಣೆ ಮಾಡಿ ಕ್ರಿಮಿನಾಶಕ, ಸಂಸ್ಕರಿಸಿದ ಬೀಜ, ರಸಗೊಬ್ಬರ, ಕೃಷಿ ಉಪಕರಣ ಬಳಕೆಗೆ ಉತ್ತೇಜನ ನೀಡಿ ದೇಶದಲ್ಲಿ ಗಮನಾರ್ಹ ಪ್ರಗತಿ ಕಾರಣರಾಗುವ ಮೂಲಕ ದೇಶಕ್ಕೆ ಆಹಾರ ಭದ್ರತೆ ಕಲ್ಪಿಸಿಕೊಟ್ಟರು. ಹೀಗೆ ಹತ್ತಾರು ಸಾಧನೆ, ಕೊಡುಗೆ ನೀಡಿರುವ ಬಾಬೂಜಿ ಅವರನ್ನು ಮೈಸೂರಿನಲ್ಲೇ ಭೇಟಿಯಾಗುವ ಅವಕಾಶ ದೊರೆಯಿತು. ಈಗಲೂ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದರು.
ಎಂಎಲ್‌ಸಿ ಸಿ.ಎನ್.ಮಂಜೇಗೌಡ ಮಾತನಾಡಿ, ಸಿದ್ದರಾಮಯ್ಯ ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ. ನಾನು ಜೆಡಿಎಸ್ ಇರಬಹುದು. ಒಳ್ಳೆಯ ಕೆಲಸವನ್ನು ಹೇಳಬೇಕಲ್ವೇ? ಜಯಂತಿ ಕಾರ್ಯಕ್ರಮಗಳನ್ನು ಸರಿಯಾದ ಸಮಯದಲ್ಲಿ ಪ್ರಾರಂಭವಾಗಬೇಕು. ಮಹನೀಯರು ಈ ಕಾಲದಲ್ಲಿ ಸಹ ಸೃಷ್ಟಿಯಾಗಬೇಕು. ಮಕ್ಕಳು ಅಂಬೇಡ್ಕರ್, ಜಗಜೀವನರಾಮ್ ಆಗಬೇಕು ಎಂದರು
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಅಸ್ಪಶ್ಯತೆ ಇನ್ನೂ ಜೀವಂತವಾಗಿದೆ. ಹಿಂದಿಗಿಂತ ಈಗ ಕಡಿಮೆಯಾಗಿದೆ. ಮೀಸಲಾತಿ ಇದ್ದರೂ ಶೇ.50ರಷ್ಟು ಜನರು ಉದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಅಂಕುಡೊಂಕು ಸರಿಪಡಿಸಿ ಸಮಾಜವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದರು.
ನನ್ನ ಕ್ಷೇತ್ರದಲ್ಲಿ ಬಾಬು ಜಗಜೀವನರಾಮ್ ಸಮುದಾಯದವರು 18 ಸಾವಿರ ಮತದಾರರಿದ್ದಾರೆ. ಕಾರ್ಯಕ್ರಮಕ್ಕೆ ಯಾರೂ ಬಂದಿಲ್ಲ. ಕಡಿಮೆ ಎಂದರೂ 2 ಸಾವಿರ ಜನರು ಬರಬೇಕಿತ್ತು. ನನ್ನ ಕ್ಷೇತ್ರದ ಕೈಲಾಸಪುರಂನಲ್ಲಿ ಸಮುದಾಯದ ಹೆಣ್ಣು ಮಕ್ಕಳು ವಿದ್ಯಾವಂತರಾಗಿದ್ದಾರೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ನರಸಿಂಹಮೂರ್ತಿ ಮಾತನಾಡಿ, ಬಾಬೂಜಿ ಅವರು ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮದೇ ಆದ ಹಲವು ಕೊಡುಗೆ ನೀಡಿದ್ದಾರೆ. ರಾಷ್ಟ್ರ ನಿರ್ಮಾಣ ಎಂದರೆ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸದೃಢವಾಗಿ ಕಟ್ಟುವ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.
ಕಾರ್ಮಿಕರು ಹೆಚ್ಚಾಗಿ ಕೆಲಸವನ್ನು ಮಾಡುವುದರಿಂದ ಅವರಿಗೆ ಆಯಾಸವಾಗಬಹುದು. ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಮನದಟ್ಟು ಮಾಡಿಕೊಂಡು, ಕಾರ್ಮಿಕರಿಗೆ ಕೇವಲ 8 ಗಂಟೆಗಳ ಕಾಲ ಕೆಲಸವನ್ನು ಮಾಡಬೇಕು ಎಂದು ತೀರ್ಮಾನ ಮಾಡಿದರು. ಜತೆಗೆ ಅವರಿಗೆ ಶಿಕ್ಷಣ ಸಂಸ್ಥೆಗಳನ್ನು ತೆಗೆದರು. ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಟ್ಟರು ಎಂದರು.
ಜಿಪಂ ಸಿಇಒ ಎಸ್.ಯುಕೇಶ್‌ಕುಮಾರ್, ಡಾ.ಪಿ. ಶಿವರಾಜು, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಸಹಾಯಕ ನಿರ್ದೇಶಕ ಎ.ಎನ್‌ಜನಾರ್ಧನ ಇನ್ನಿತರರಿದ್ದರು. ಇದಕ್ಕೂ ಮುನ್ನ, ರೈಲ್ವೆ ನಿಲ್ದಾಣದ ಎದುರಿನ ಬಾಬೂಜಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆ ನಡೆಸಲಾಯಿತು.