ಅಪಘಾನಿಸ್ತಾನದಿಂದ ಸುರಕ್ಷಿತವಾಗಿ ಮರಳಿದ ಉಳ್ಳಾಲದ ಮೆಲ್ವಿನ್

IMG_20210819_115241
Published on

ಮಂಗಳೂರು : ಕಾಬೂಲ್‍ನಿಂದ ಭಾರತೀಯ ವಾಯುಸೇನೆ ಏರ್‌ಲಿಫ್ಟ್ ಮಾಡಿದವರಲ್ಲಿ ಉಳ್ಳಾಲದ ಮೆಲ್ವಿನ್ ಕೂಡ ಒಬ್ಬರಾಗಿದ್ದು, ಬುಧವಾರ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

ಕಾಬೂಲ್‌ನ ನ್ಯಾಟೋ ಪಡೆಯ ಮಿಲಿಟರಿ ಬೇಸ್‌ ಕ್ಯಾಂಪ್‌ನ ಆಸ್ಪತ್ರೆಯಲ್ಲಿ ಎಲೆಕ್ಟ್ರಿಕಲ್‌ ಮೈಂಟೆನೆನ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು, ಸೀ-17 ಏರೊಸ್ಪೇಸ್ ವಿಮಾನದ ಮೂಲಕ ಆಗಸ್ಟ್ 16ರ ಬೆಳಗಿನ ಜಾವ ಏರ್‌ಲಿಫ್ಟ್ ಮಾಡಿದ್ದಾರೆ. ಗುಜರಾತ್ ಜಾಮ್‍ನಗರ ಬೇಸ್‍ನಲ್ಲಿ ಲ್ಯಾಂಡಿಂಗ್ ಆದ ಈ ವಿಮಾನದಲ್ಲಿ ಬಂದಿಳಿದ ಮೆಲ್ವಿನ್, ಬಳಿಕ ನವದೆಹಲಿ ತಲುಪಿ ನಂತರ ಉಳ್ಳಾಲದ ಮನೆಗೆ ತಲುಪಿದ್ದಾರೆ. 10 ವರ್ಷಗಳಿಂದ ಕಾಬೂಲ್ ಆಸ್ಪತ್ರೆಯಲ್ಲಿ ತಂತ್ರಜ್ಞರಾಗಿ ಅವರು ಕೆಲಸ ನಿರ್ವಹಿಸುತ್ತಿದ್ದರು.ಇವರ ಸಹೋದರ ಮಾತ್ರ ಅಫ್ಘಾನ್‌ನಲ್ಲೇ ಉಳಿದುಕೊಂಡಿದ್ದು ಭಾರತಕ್ಕೆ ಮರಳಲು ವಿಮಾನದ ನಿರೀಕ್ಷೆಯಲ್ಲಿದ್ದಾರೆ.

ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯೇ ನಮ್ಮ ಆಸ್ಪತ್ರೆ ಇದ್ದುದರಿಂದ ಬರಲು ಸಾಧ್ಯವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ನಿಲ್ದಾಣದಲ್ಲಿ ಜನ ಸೇರುತ್ತಿರುವುದರಿಂದ ಹೆಚ್ಚಿನ ವಿಮಾನಗಳು ರಾತ್ರಿ ಹೊತ್ತಿನಲ್ಲೇ ಲ್ಯಾಂಡಿಂಗ್ ಆಗುತಿದ್ದವು. ಎರಡು ದಿನಗಳ ಕಾಲ ವಿಮಾನ ನಿಲ್ದಾಣದಲ್ಲೇ ಅನ್ನ, ಆಹಾರವಿಲ್ಲದೆ ಕಾದು, ಬಳಿಕ ವಿಮಾನವನ್ನು ಹತ್ತಿದ್ದೇವೆ. ಸಿಕ್ಕ ಸಿಕ್ಕ ವಿಮಾನಗಳಲ್ಲಿ ಭಾರತೀಯರನ್ನು ಏರ್‌ಲಿಫ್ಟ್ ಮಾಡಲಾಗಿದೆ . ಇದರಿಂದ ಹಲವಾರು ಜನ ಲಂಡನ್, ನಾರ್ವೆ, ದುಬೈ ದೇಶಗಳ ವಿಮಾನಗಳ ಮೂಲಕ ತೆರಳಿ ಅಲ್ಲೇ ಉಳಿದಿದ್ದಾರೆ. ಇವರಲ್ಲಿ ಹಲವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಅನ್ನುವ ವಿಚಾರ ಸಹೋದ್ಯೋಗಿಗಳಿಂದ ತಿಳಿದುಬಂದಿದೆ ಎಂದು ಮೆಲ್ವಿನ್ ತಿಳಿಸಿದ್ದಾರೆ.

ಇಕೊಲಾಗ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಮೆಲ್ವಿನ್ ಸಹೋದರ ಕೆಲಸ ಮಾಡುತ್ತಿದ್ದು, ಊರಿಗೆ ಬರಲು ವಿಮಾನ ಇಲ್ಲದೆ ಅಲ್ಲೇ ಸಿಲುಕಿದ್ದಾರೆ, ಎರಡು ಬಾರಿ ವಾಟ್ಸ್‌ಆಯಪ್ ಕರೆ ಮೂಲಕ ಮಾತಾಡಿದ್ದೇವೆ ಎಂದು ಮೆಲ್ವಿನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net