

ಆನೇಕಲ್: ಪಟ್ಟಣದ ಬನ್ನೇರುಘಟ್ಟ ರಸ್ತೆಯಲ್ಲಿ ಗುರುವಾರ ಸರಣಿ ಅಪಘಾತ ಸಂಭವಿಸಿ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶ ಮೂಲದ ಪ್ರಸಾದ್ ರಾವ್(60) ಮೃತ. ವೇಗವಾಗಿ ಬರುತ್ತಿದ್ದ ಬಸ್‌ಗೆ ಅಡ್ಡ ಬಂದ ಬೈಕ್ ಸವಾರನಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ಬಿಎಂಟಿಸಿ ಬಸ್, ಎರಡು ಬೈಕ್ ಹಾಗೂ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪಾದಚಾರಿ ಮತ್ತು ಇಬ್ಬರು ಬೈಕ್ ಸವಾರರು ಮತ್ತು ಬಸ್ ಪ್ರಯಾಣಿಕನಿಗೆ ಗಾಯಗಳಾಗಿವೆ. ವೇಗವಾಗಿ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಗುದ್ದಿದ ರಭಸಕ್ಕೆ ಬಸ್‌ನಿಂದ ಹಾರಿ ಪ್ರಯಾಣಿಕ ಕೆಳಗಡೆ ಬಿದ್ದಿದ್ದಾನೆ. ವಾಹನಗಳಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೂ ಬಸ್ ಗುದ್ದಿದೆ. ಅಪಘಾತದ ಹಿನ್ನೆಲೆಯಲ್ಲೇ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ, ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಿಎಂಟಿಸಿ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಬನ್ನೇರುಘಟ್ಟ ಪೊಲೀಸರು ವಾಹನಗಳನ್ನು ತೆರವು ಗೊಳಿಸಿದ್ದಾರೆ. ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.