ಅಪಘಾತದಲ್ಲಿ ರೈತ ಸಾವು, ಬಾಲಕಿಗೆ ಗಂಭೀರ ಗಾಯ

Published on

ಹೊಳೆನರಸೀಪುರ: ಸಂತೆಗೆ ಕುರಿಗಳನ್ನು ಮಾರಾಟ ಮಾಡಲು ತೆರಳುತ್ತಿದ್ದ ಗೂಡ್ಸ್ ಆಟೋಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಲಕಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದು ಬಾಲಕಿ ಸ್ಥೀತಿ ಗಂಭೀರವಾಗಿದೆ.


ಸಾಲಿಗ್ರಾಮ ತಾಲೂಕು ಭೇರ್ಯ ಸಮೀಪದ ಕೆಂಚನಹಳ್ಳಿ ಗ್ರಾಮದ ರಾಮೇಗೌಡ (40) ಮೃತ ರೈತ. ಅದೇ ಗ್ರಾಮದ ಶಿವರಾಜ, ಕುಮಾರ, ಶಿವಕುಮಾರ, ರೇವಣ್ಣ, ಶಿವಕುಮಾರ ಪುತ್ರಿ ಸಿಂಚನಾ ಗಾಯಗೊಂಡವರು. ಎಲ್ಲರನ್ನೂ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿ ಸ್ಥಿತಿ ಚಿಂತಾಜನಕವಾಗಿದೆ.


ಕೆಂಚನಹಳ್ಳಿ ಗ್ರಾಮದಿಂದ ಎಲ್ಲರೂ ಆಟೋದಲ್ಲಿ ಐದಾರು ಕುರಿಗಳನ್ನು ತುಂಬಿಕೊಂಡು ಮಾರಾಟ ಮಾಡಲು ಸೋಮವಾರ ಬೆಳಗ್ಗೆ ಸಂತೆಗೆ ತೆರಳುತ್ತಿದ್ದರು. ಮೈಸೂರು-ಹಾಸನ ರಸ್ತೆಯ ಹಳ್ಳಿ ಮೈಸೂರು ಕ್ರಾಸ್ ಬಳಿ ವೇಗವಾಗಿ ಬಂದ ಕಾರು ಗೂಡ್ಸ್ ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಲ್ಲರೂ ಆಟೋದಿಂದ ಕೆಳಗೆ ಹಾರಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ರಾಮೇಗೌಡ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಲಕಿ ತಲೆಗೆ ತೀವ್ರ ಗಾಯಗಳಾಗಿದ್ದು, ಆಟೋ ಚಾಲಕ ಶಿವರಾಜ ಎಂಬಾತನ ಎರಡು ಕಾಲುಗಳು ತುಂಡಾಗಿವೆ. ಸ್ಥಳೀಯರ ನೆರವಿನಿಂದ ಎಲ್ಲರನ್ನೂ ಆಂಬುಲೆನ್ಸ್ ಮೂಲಕ ಹಾಸನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಟೋದಲ್ಲಿದ್ದ ಒಂದೆರಡು ಕುರಿಗಳು ಮೃತಪಟ್ಟಿವೆ.


ರಾಮೇಗೌಡ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಹಾಗೂ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net