ತುಮಕೂರು: ನಂದಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಕಂಟೇನರ್ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಪೃತಪಟ್ಟಿದ್ದಾರೆ.
ಗುಬ್ಬಿ ತಾಲೂಕು ಸಿ.ಎಸ್.ಪುರ ಹೋಬಳಿ ಅಂಕಲಕೊಪ್ಪದ ಧನುಷ್ಗೌಡ (22), ನಿಟ್ಟೂರು ಹೋಬಳಿ ಬಸವಾಪಟ್ಟಣದ ರಾಕೇಶ್ (24) ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಸಮೀಪದ ಚಿಕ್ಕಚೆಲ್ಲೂರು ಗ್ರಾಮದ ಧನರಾಜ್ (24) ಮೃತರು. ಈ ಮೂವರು ನಗರದ ಉಪ್ಪಾರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದಾಬಸ್ಪೇಟೆಯ ಎಂ.ಇ.ಸೋಲಾರ್ ಕಂಪನಿ ನೌಕರರಾಗಿದ್ದ ಮೂವರು ರಾತ್ರಿ ಪಾಳಿ ಕೆಲಸ ಮುಗಿಸಿ ಬೆಳಗ್ಗೆ ತುಮಕೂರಿಗೆ ಒಂದೇ ಬೈಕ್ನಲ್ಲಿ ಹಿಂದಿರುತ್ತಿದ್ದರು ಎನ್ನಲಾಗಿದೆ. ಮಾರ್ಗಮಧ್ಯೆ ನಂದಿಹಳ್ಳಿ ಬಳಿ ಬೆಳಗ್ಗೆ 6.45ರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಚಲಿಸುತ್ತಿದ್ದ ಕಂಟೇನರ್ಗೆ ಡಿಕ್ಕಿ ಹೊಡೆದು ಆಯತಪ್ಪಿ ಮತ್ತೊಂದು ಲಾರಿ ಅಡಿಗೆ ಸಿಲುಕಿ ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ. ಬೈಕ್ ಸಂಪೂರ್ಣ ಛಿದ್ರವಾಗಿತ್ತು.
ಎಸ್ಪಿ, ಎಎಸ್ಪಿ ದೌಡು: ಸುದ್ದಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಎಎಸ್ಪಿಗಳಾದ ಗೋಪಾಲ್, ಪುರುಷೋತ್ತಮ್, ಕ್ಯಾತಸಂದ್ರ ಸಿಪಿಐ ರಾಮ್ಪ್ರಸಾದ್, ಸಿಪಿಐ ಚೇತನ್ ಕುಮಾರ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಶವಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾಸ್ಪತ್ರೆಯ
ಶವಾಗಾರದ ಮುಂದೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬದ ಆಧಾರಗಳಾಗಿದ್ದ ಮಕ್ಕಳನ್ನು ಕಳೆದುಕೊಂಡು ದು@ಖದಿಂದ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.