ಅಪಘಾತದಲ್ಲಿ ಮೂವರಿಗೆ ಗಾಯ

16M.D.R.7
Published on

ಮದ್ದೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದ್ದೂರು ಬೈಪಾಸ್ ರಸ್ತೆಯ ಕೆ.ಕೋಡಿಹಳ್ಳಿ ಬಳಿ ಭಾನುವಾರ ಸಂಜೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗೊಂಡಿದ್ದು, ಮೂರ‌್ನಾಲ್ಕು ಜನರಿಗೆ ಗಾಯಗಳಾಗಿವೆ.

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜಹಂಸ ಬಸ್ ಮದ್ದೂರಿನ ಬೈಪಾಸ್ ರಸ್ತೆಯ ಕೆ.ಕೋಡಿಹಳ್ಳಿ ಸಮೀಪ ಮುಂದೆ ಸಾಗುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮುಂದೆ ಹೋಗುತ್ತಿದ್ದ ಮತ್ತೆರೆಡು ಕಾರುಗಳಿಗೆ ಕಾರು ಡಿಕ್ಕಿ ಹೊಡೆದಿದೆ.

ತಕ್ಷಣವೇ ಗಾಯಾಳುಗಳನ್ನು ಸ್ಥಳೀಯರು ಮತ್ತು ವಾಹನ ಸವಾರರು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಸರಣಿ ಅಪಘಾತದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಕಾರುಗಳು ಅಡ್ಡಾದಿಡ್ಡಿ ಬಿದ್ದಿದ್ದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು, ಪ್ರಯಾಣಿಕರು ಪರದಾಡಿದರು. ಸ್ಥಳಕ್ಕೆ ಮದ್ದೂರು ಸಂಚಾರ ಪೊಲೀಸರು ತೆರಳಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net