ಹನೂರು: ತಾಲೂಕಿನ ಕೌದಳ್ಳಿ ಗ್ರಾಮದ ಬಳಿ ಸೋಮವಾರ ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿದ್ದಾನೆ.
ಗ್ರಾಮದ ಕ್ರಿಶ್ಚಿಯನ್ ಕಾಲನಿಯ ಜೀವನ್ (18) ಮೃತ. ಈತ ಕಾರ್ಯನಿಮಿತ್ತ ಬೈಕ್‌ನಲ್ಲಿ ಪೆಟ್ರೋಲ್ ಬಂಕ್‌ನತ್ತ ತೆರಳುತ್ತಿದ್ದ. ಈ ವೇಳೆ ಮಲೆಮಹದೇಶ್ವರ ಬೆಟ್ಟದ ಕಡೆಯಿಂದ ಎದುರು ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವ ತನಕ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಸುಮಾರು ಒಂದು ಗಂಟೆಗಳ ಕಾಲ ಈ ಮಾರ್ಗದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ರಾಮಾಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ಪರಿಸ್ಥಿತಿಯನ್ನು ಅರಿತು ಗ್ರಾಮಸ್ಥರನ್ನು ಮನ ಒಲಿಸಲು ಮುಂದಾದರು. ಸ್ಥಳಕ್ಕಾಗಮಿಸಿದ ಡಿಪೋ ವ್ಯವಸ್ಥಾಪಕ ಭೋಗನಾಯ್ಕ ರೊಂದಿಗೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದರು. 25 ಸಾವಿರ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು. ನಂತರ ಪೊಲೀಸರು ಮೃತದೇಹವನ್ನು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆ ರವಾನಿಸಿ, ಮರಣೋತ್ತರ ಪರೀಕ್ಷೆಗೆ ನೀಡಿದರು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.