ಅಪಘಾತದಲ್ಲಿ ಬೈಕ್​ ಸವಾರ ಮೃತ

Published on

ತುರುವೇಕೆರೆ: ತಾಲೂಕಿನ ಗೋಣಿತುಮಕೂರಿನಲ್ಲಿ ಬುಧವಾರ ಕೆಎಸ್​ಆರ್​ಟಿಸಿ ಬಸ್​ ಮತ್ತು ದ್ವಿಚಕ್ರವಾಹನ ಮುಖಾಮುಖಿ ಡಿಕ್ಕಿಯಾಗಿ ಬೈಕ್​ ಸವಾರ ಮೃತಪಟ್ಟಿದ್ದು, ಹಿಂಬದಿಸವಾರ ಗಾಯಗೊಂಡಿದ್ದಾನೆ. ತಾಲೂಕಿನ ದಬ್ಬೇಟ್ಟ ಹೋಬಳಿಯ ಹಿಂಡುಮಾರನಹಳ್ಳಿಯ ನಿವಾಸಿ ದೀಪಕ್​(32)ಮೃತ. ಹಿಂಬದಿಸವಾರ ಅದೇ ಗ್ರಾಮದ ಪುಟ್ಟಸ್ವಾಮಿ(35) ಗಾಯಗೊಂಡಿದ್ದಾರೆ. ಇಬ್ಬರೂ ಪಟ್ಟಣದ ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ಗ್ರಾಮಕ್ಕೆ ಹಿಂತಿರುಗುವಾಗ ಗೋಣಿತುಮಕೂರು ಗ್ರಾಮದ ದೇವಸ್ಥಾನದ ಸಮೀಪ ದಬ್ಬೇಟ್ಟದಿಂದ ತುರುವೇಕೆರೆ ಕಡೆಗೆ ಬರುತ್ತಿದ್ದ ಬಸ್​ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು ತೀವ್ರ ಗಾಯಗೊಂಡಿದ್ದ ದೀಪಕ್​ ಅವರನ್ನು ತಕ್ಷಣ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹಿಂಬದಿಯ ಸವಾರ ಪಟ್ಟಸ್ವಾಮಿಗೆ ಗಂಭೀರ ಗಾಯಗಳಾಗಿದ್ದರಿಂದ ಐಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ. ದೀಪಕ್​ ವಿವಾಹವಾಗಿ ಕೇವಲ ಒಂದು ವರ್ಷವಷ್ಟೇ ಕಳೆದಿದ್ದು, ಮೃತರ ಸಂಬಂಧಿಕರ ರೋಧನ ಮುಟ್ಟಿದೆ. ಪಟ್ಟಣದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನ ಗ್ಲಾಸ್​ ಒಡೆದು 15 ಲಕ್ಷ ರೂ. ಕಳವು

ಗುಬ್ಬಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್​ ಒಡೆದು 15 ಲಕ್ಷ ರೂ. ದೋಚಿದ್ದಾರೆ. ತಾಲೂಕಿನ ಕಡಬ ಹೋಬಳಿ ಡಿ.ರಾಂಪುರದ ಕೊಬ್ಬರಿ ವರ್ತಕ ಶಿವರಾಜು ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಕಾರ್ಯನಿಮಿತ್ತ ಪಟ್ಟಣದ ಎಪಿಎಂಸಿ ಕಚೇರಿಗೆ ತೆರಳಿದ್ದ ವೇಳೆ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್​ ಒಡೆದು ಹಣ ದೋಚಿದ್ದಾರೆ.

ಕಚೇರಿಯ ಒಳಗೆ ಹೋಗಿ ಬಂದು ನೋಡಿದಾಗ ಟನೆ ತಿಳಿದಿದ್ದು, ಗುಬ್ಬಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net