ಅಪಘಾತದಲ್ಲಿ ಪುತ್ರ ಸಾವು, ತಂದೆಗೆ ಗಾಯ

Bike Accident
Published on

ಪಾಂಡವಪುರ: ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿಯಲ್ಲಿ ಸೋಮವಾರ ರಸ್ತೆ ಬದಿಯಲ್ಲಿ ನಿಂತಿದ್ದ ಕಂಟೈನರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದ ಸೋಮೇಶ್(28) ಮೃತ. ಹಿಂಬದಿಯಲ್ಲಿ ಕುಳಿತ್ತಿದ್ದ ಮೃತನ ತಂದೆ ಬೋರೇಗೌಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಯುವಕನ ತಂದೆ ಶಿಕ್ಷಕ ಬೋರೇಗೌಡ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಮನೆಯ ಗೃಹ ಪ್ರವೇಶದ ಶುಭ ಕಾರ್ಯ ಮುಗಿಸಿ ಸಂಜೆ ಮಗನ ಜತೆ ಪಾಂಡವಪುರ ಪಟ್ಟಣಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆದ ಬೆಳಾಳ್ಳೆ ಗ್ರಾಮದ ಬಳಿ ಅವಘಡ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತ್ತಾದರೂ ಮಾರ್ಗಮಧ್ಯೆದಲ್ಲಿ ಸೋಮೇಶ್ ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ಬೋರೇಗೌಡನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಯುವಕನ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರ ಆಕ್ರೋಶ: ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿಯ ಈ ಭಾಗದಲ್ಲಿ ಅಪಘಾತಗಳು ಹೆಚ್ಚಾಗಿದ್ದು, ಭಾರಿ ವಾಹನ ಚಾಲಕರ ನಿರ್ಲಕ್ಷ್ಯವೇ ಕಾರಣವಾಗಿದೆ. ಭಾರಿ ವಾಹನಗಳನ್ನು ರಾತ್ರಿ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net