ನಂಜನಗೂಡು: ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು, ಪತಿ ಗಂಭೀರ ಗಾಯಗೊಂಡಿದ್ದಾನೆ.
ನಂಜನಗೂಡು ತಾಲೂಕು ಬದನವಾಳು ಗ್ರಾಮದ ಬದನವಾಳು ಗ್ರಾಮದ ಭವಾನಿ (35) ಮೃತರು. ಪತಿ ಮಹೇಶ್ (40) ಗಾಯಗೊಂಡವ.
ಸೋಮವಾರ ಪಟ್ಟಣದ ರಾಷ್ಟ್ರಪತಿ ರಸ್ತೆಯ 15ನೇ ಕ್ರಾಸ್ ಬಳಿ ದಂಪತಿ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಕೆಳಗೆ ಬಿದ್ದ ಪರಿಣಾಮ ಲಾರಿಯ ಚಕ್ರ ಭವಾನಿ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪತಿ ಮಹೇಶ್‌ಗೆ ಗಂಭೀರ ಗಾಯವಾಗಿದ್ದು ಆತನ ಬಲಗಾಲು ಮುರಿದಿದ್ದು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದರಾಜು, ಸಿಬ್ಬಂದಿ ಮಹೇಂದ್ರ, ಪ್ರಸಾದ್, ರಮೇಶ್, ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಲಾರಿ ಚಾಲಕನನ್ನು ವಶಕ್ಕೆ ಪಡೆದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.