ಅಪಘಾತದಲ್ಲಿ ಟೆಕ್ಕಿ ಸಾವು, ಭಾವಿ ಪತ್ನಿ ಗಂಭೀರ

Published on

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಯಂತ್ರಣ ತಪ್ಪಿ ಕಾರಿಗೆ ಭೀಕರವಾಗಿ ಡಿಕ್ಕಿಯೊಡೆದ ಪರಿಣಾಮ ಟೆಕ್ಕಿ ಸ್ಥಳದಲ್ಲಿಯೇ ಮೃತಪಟ್ಟು, ಭಾವಿ ಪತ್ನಿ ಚೈತ್ರಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಭರತ್ ಪ್ರಸಾದ್ ಮೃತಪಟ್ಟು, ಚೈತ್ರಾ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮದುವೆ ನಿಶ್ಚಿತಾರ್ಥಗೊಂಡಿದ್ದ ಭರತ್‌ಪ್ರಸಾದ್ ಹಾಗೂ ಚೈತ್ರಾ ಅವರು ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದು, ಚಾಮುಂಡಿಬೆಟ್ಟದಲ್ಲಿ ದೇವರ ದರ್ಶನದ ಬಳಿಕ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಗರದ ಹೊರ ವಲಯದ ಕಳಸ್ತವಾಡಿ ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಎದುರು ಬರುತ್ತಿದ್ದ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ನಜ್ಜುಗುಜ್ಜುಗೊಂಡು ರಸ್ತೆ ಬದಿಯ ದೇವಸ್ಥಾನದ ಕಾಂಪೌಂಡ್ ಗೋಡೆಗೆ ಅಪ್ಪಳಿಸಿದೆ.
ಅಪಘಾತದಿಂದ ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣ, ಪುಟ್ಟ ಗಾಯವಾಗಿದೆ. ಘಟನೆಯಿಂದ ಕೆಲ ಕಾಲ ಬೆಂಗಳೂರು-ಮೈಸೂರು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಬಳಿಕ ಡಿಸಿಪಿ ಗೀತಾಪ್ರಸನ್ನ ಅವರ ನೇತೃತ್ವದಲ್ಲಿ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಕಾರಿನ ಒಳಗೆ ಸಿಲುಕಿದ್ದ ಇಬ್ಬರನ್ನು ಹೊರ ತೆಗೆಯಲಾಯಿತು. ಎನ್.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net