ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಸಾವು

bkt-24-7
ಚಿದಾನಂದ ಯಮನಪ್ಪ ಭಜಂತ್ರಿ
Published on

ಬಾಗಲಕೋಟೆ: ಅಪಘಾತವಾಗಿ ತೀವ್ರ ಗಾಯಗೊಂಡಿದ್ದ ಗುಡೂರ ಎಸ್.ಸಿ ಗ್ರಾಮದ ಯೋಧ ಚಿದಾನಂದ ಯಮನಪ್ಪ ಭಜಂತ್ರಿ(53) ಮಂಗಳವಾರ ರಾತ್ರಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ.
ಬೆಳಗಾವಿಯ ಖಾನಾಪುರದಲ್ಲಿ ಸಿಆರ್ ಪಿಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಮಡದಿ ಅನಾರೋಗ್ಯ ಹಿನ್ನಲೆಯಲ್ಲಿ ಬಾಗಲಕೋಟೆ ತಾಲೂಕಿನ ಸಿಮಿಕೇರಿ ಗ್ರಾಮಕ್ಕೆ ರಜೆ ಮೇಲೆ ಬಂದಿದ್ದರು. ಕಳೆದ 15 ದಿನಗಳ ಹಿಂದೆ ಬೈಕ್ ಮೇಲೆ ತೆರಳುವಾಗ ಎದುರಿಗೆ ಬಂದ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಸಿಮಿಕೇರಿ ಬಳಿ ನಡೆದ ಅಪಘಾತದಿಂದ ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಕೊನೆಯೂಸಿರು ಎಳೆದಿದ್ದಾರೆ.
ಯೋಧನ ಪಾರ್ಥಿವ ಶರೀರಕ್ಕೆ ಬೆಳಗಾವಿಯ ಮಿಲಿಟರಿ ಕಚೇರಿಯಲ್ಲಿ ಗೌರವ ನಮನ ಸಲ್ಲಿಸಿದ ಬಳಿಕ ಬುಧವಾರ ಸ್ವ ಗ್ರಾಮ ಗುಡೂರ ಎಸ್ಸಿ ಗ್ರಾಮಕ್ಕೆ ಕರೆ ತರಲಾಗಿತ್ತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಜನಪ್ರತಿನಿಧಿಗಳು, ಸಾರ್ವಜನಿಕರು ಸುತ್ತಮುತ್ತಲೀನ ಗ್ರಾಮಸ್ಥರು ಆಗಮಿಸಿ ಅಂತಿಮ ದರ್ಶನ ಪಡೆದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಗ್ರಾಮದಲ್ಲಿ ಅಂತ್ಯಕ್ರಿಯೆ ಬುಧವಾರ ರಾತ್ರಿ ನಡೆಸಲಾಯಿತು.

ಮೃತ ಯೋಧನ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರಿ ಪ್ರಿಯಾ ಹಾಗೂ ಪುತ್ರ ಪವನ ರೋದನೆ ಮುಗಿಲು ಮುಟ್ಟಿತ್ತು. ಕುಟುಂಬಸ್ಥರ ಸಂಕಟ ನೋಡಿ ಗ್ರಾಮಸ್ಥರು ಕಣ್ಣೀರು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net