

ಸೇಡಂ: ರಸ್ತೆ ಅಪಘಾತದಲ್ಲಿ ಕೆಎಸ್‌ಆರ್‌ಪಿ ಪೇದೆ ಮೃತಪಟ್ಟ ಘಟನೆ ಹೊರವಲಯದ ವಾಲ್ಮೀಕಿ ನಗರ ಸಮೀಪದ ವಾಗ್ದರಿ-ರಿಬ್ಬನಪಲ್ಲಿ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಜರುಗಿದೆ.
ಕೊಂತನಪಲ್ಲಿ ಗ್ರಾಮದ ಶ್ರೀನಿವಾಸ ಲಕ್ಷ್ಮ್ಮಪ್ಪ ಗಡ್ಡಿಮಿದಿ (೨೮) ಮೃತ ಪೇದೆ. ತಂದೆ-ತಾಯಿ, ಸಹೋದರ ಇದ್ದಾರೆ. ಕರ್ತವ್ಯ ನಿರ್ವಹಿಸಿ ಕಲಬುರಗಿಯಿಂದ ಬೈಕ್ ಮೇಲೆ ಸ್ವಗ್ರಾಮಕ್ಕೆ ಬರುತ್ತಿರುವಾಗ ವಾಲ್ಮೀಕಿ ನಗರದ ಸಮೀಪ ಟ್ರಕ್ ಒಂದಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಶನಿವಾರ ಬೆಳಗ್ಗೆ ಸ್ವಗ್ರಾಮದಲ್ಲಿ ಸಿಪಿಐ ಸಂದೀಪ್‌ಸಿಂಗ್ ಮುರಗೋಡ, ಕೆಎಸ್‌ಆರ್‌ಪಿ ಎಎಸ್‌ಐ ಕಾಶೀನಾಥ ಭೋಗತೆ ನೇತೃತ್ವದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ನಮನ ಸಲ್ಲಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಮಗನನ್ನು ಕಳೆದುಕೊಂಡ ಹೆತ್ತವರು ಹಾಗೂ ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿತ್ತು.