

ಕೊಪ್ಪಳ: ತಾಲೂಕಿನ ಬೇವಿನಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಾಲ್ಕು ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಆರು ಜನರು ಗಾಯಗೊಂಡಿದ್ದಾರೆ.
ಟಾಟಾ ಏಸ್, ಬೊಲೆರೋ, ಗೂಡ್ಸ್ ವಾಹನ ಮತ್ತ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿದೆ. ಟಾಟಾ ಏಸ್ ಟಯರ್ ಬ್ಲಾಸ್ಟ್ ಆಗಿದ್ದು, ಎದುರಿನ ಗೂಡ್ಸ್ ವಾಹನಕ್ಕೆ ಗುದ್ದಿದೆ, ನಿಯಂತ್ರಣ ಕಳೆದುಕೊಂಡ ಗೂಡ್ಸ್ ವಾಹನ ನಿಂತಿದ್ದ ಬೊಲೆರೋ ಹಾಗೂ ಬಸ್‌ಗೆ ಡಿಕ್ಕಿಯಾಗಿದೆ. ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದ ಹನುಮಂತಪ್ಪ ದೇವರ ಮನಿ(42), ಬಸಾಪುರ ಗ್ರಾಮದ ಪ್ರಮಿಳಾ (39) ಸ್ಥಳದಲ್ಲೇ ಅಸುನೀಗಿದ್ದಾರೆ.
ಟಾಟಾ ಏಸ್ ಚಾಲಕ ರಾಜಾ ಹುಸೇನ್‌ಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಐವರಿಗೆ ಗಾಯಗಳಾಗಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತ ವೇಳೆ ಇದೇ ದಾರಿಯಲ್ಲಿ ಸಾಗುತ್ತಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ. ವಾಹನ ನಿಲ್ಲಿಸಿ, ಆ್ಯಂಬುಲೆನ್ಸ್ ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ. ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.