

ಚಾಮರಾಜನಗರ: ತಾಲೂಕಿನ ಕಮರವಾಡಿ ಗೇಟ್ ಬಳಿ 2 ಬೈಕ್‌ಗಳ ನಡುವೆ ಗುರುವಾರ ರಾತ್ರಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಅಗ್ನಿವೀರ್ ಯೋಧನೊಬ್ಬ ಮೃತಪಟ್ಟಿದ್ದಾರೆ.
ನಗರದ ಸೇವಾ ಭಾರತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ರಾಮಚಂದ್ರ ಅವರ ಪುತ್ರ ಆರ್.ಪ್ರಜ್ವಲ್(21) ಮೃತ ದುರ್ದೈವಿ. ಈತ ಇತ್ತೀಚೆಗೆ ಅಗ್ನಿವೀರ್ ಹುದ್ದೆಗೆ ನೇಮಕಾತಿಯಾಗಿ ಪಶ್ಚಿಮ ಬಂಗಾಳದಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ರಜೆಯ ಮೇಲೆ ಊರಿಗೆ ಬಂದಿದ್ದ. ಆ.16ರಂದು ಕರ್ತವ್ಯಕ್ಕೆ ವಾಪಸ್ ಹೋಗಲಿದ್ದ. ಆದರೆ ಗುರುವಾರ ಕಾರ್ಯನಿಮಿತ್ತ ಸ್ನೇಹಿತ ರೋಹಿತ್ ಜತೆ ಬೈಕ್‌ನಲ್ಲಿ ಮೈಸೂರಿಗೆ ತೆರಳಿದ್ದನು. ರಾತ್ರಿ ತಿ.ನರಸೀಪುರ ಮಾರ್ಗವಾಗಿ ಕಮರವಾಡಿ ಗೇಟ್ ಬಳಿ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಈ ವೇಳೆ ಸ್ಥಳದಲ್ಲೇ ಪ್ರಜ್ವಲ್ ಮೃತಪಟ್ಟನು. ಸ್ನೇಹಿತ ರೋಹಿತ್ ಹಾಗೂ ಮತ್ತೊಂದು ಬೈಕ್‌ನಲ್ಲಿದ್ದ ಬಸವಟ್ಟಿ ಸುಭಾಷ್, ಮೆಳ್ಳಹಳ್ಳಿ ಮಹದೇವಪ್ರಸಾದ್‌ಗೆ ಗಾಯಗಳಾಗಿವೆ.
ವಿಷಯ ತಿಳಿದ ಸಂತೇಮರಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಮೃತಹದೇಹ ಮತ್ತು ಗಾಯಾಳುಗಳನ್ನು ಸಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಮೃತದೇಹದ ಶವಪರೀಕ್ಷೆ ನಡೆದ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂದೆಯ ಕನಸು ನನಸಾಗಿಸಿದ್ದ ಮಗ:
ವಿಶ್ವ ಹಿಂದು ಪರಿಷತ್ತಿನ ಸೇವಾ ಭಾರತಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಮಚಂದ್ರ ಅಪ್ಪಟ ದೇಶಭಕ್ತ. ತನ್ನ ಮಗ ಪ್ರಜ್ವಲ್ ಯೋಧನಾಗಬೇಕೆಂಬ ಆಸೆಯನ್ನು ಇಟ್ಟುಕೊಂಡಿದ್ದರು. ಅದರಂತೆ ಪ್ರಜ್ವಲ್ ಅಗ್ನಿವೀರ್ ನೇಮಕಾತಿಯಾಗಿ ಪಶ್ಚಿಮ ಬಂಗಾಳದಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಜೆ ಮೇಲೆ ಊರಿಗೆ ಬಂದ ಮಗನಿಗೆ ಯೋಧನ ಸಮವಸ ಹಾಕಿಸಿಕೊಂಡು ಗುರುವಾರ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯಕ್ಕೆ ಕುಟುಂಬ ಸಮೇತ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿದ್ದರು. ಮಗನ ಪೋಟೊ, ಕುಟುಂಬದ ಪೋಟೋ ತೆಗೆಸಿ ಸಂಭ್ರಮಿಸಿದ್ದರು. ಆದರೆ ಗುರುವಾರ ರಾತ್ರಿ ಅಪಘಾತದಲ್ಲಿ ಮಗ ಮೃತಪಟ್ಟ. ರಾಮಚಂದ್ರ ಶಿವಮೊಗ್ಗ ಮೂಲದವರಾಗಿದ್ದು, ಅಂತ್ಯಕ್ರಿಯೆಗಾಗಿ ಮೃತದೇಹವನ್ನು ಅಲ್ಲಿಗೆ ಕೊಂಡೊಯ್ಯಲಾಯಿತು.