ಅಪಘಾತಗಳ ನಿಯಂತ್ರಣಕ್ಕೆ ರಸ್ತೆ ಸುರಕ್ಷತೆ ಬಗ್ಗೆ ಅರಿವು

08tnp02
Published on

ತಿ.ನರಸೀಪುರ: ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ವತಿಯಿಂದ ಎರಡು ತಂಡಗಳನ್ನು ರಚಿಸಿ ರಸ್ತೆ ಸುರಕ್ಷತೆ, ವಾಹನ ಚಾಲನೆ ಪರವಾನಗಿ, ಓವರ್ ಲೋಡ್‌ಗಳನ್ನು ಪರಿಶೀಲಿಸಿ ದಂಡ ವಿಧಿಸಿ, ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತ ಡಾ.ಸಿ.ಟಿ.ಮೂರ್ತಿ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಖಾಸಗಿ ಬಸ್ ಹಾಗೂ ಕಾರಿನ ನಡುವ ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ತಿ.ನರಸೀಪುರಕ್ಕೆ ಭೇಟಿ ನೀಡಿ ಓವರ್‌ಲೋಡ್ ವಾಹನಗಳು, ಪರವಾನಗಿ ಇಲ್ಲದೆ ಸಂಚರಿಸುತ್ತಿರುವ ಹಾಗೂ ಲೈಸೆನ್ಸ್ ಇಲ್ಲದ ವಾಹನ ಚಾಲಕರಿಗೆ ದಂಡ ವಿಧಿಸಲಾಗಿದೆ. ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ 20ಕ್ಕೂ ಹೆಚ್ಚು ಆಟೋಗಳನ್ನು ವಶಕ್ಕೆ ಪಡೆಯಲಾಗಿದೆ. ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ಸಂಚರಿಸುತ್ತಿದ್ದ ನಾಲ್ಕು ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ವಾರಕ್ಕೊಮ್ಮೆ ಸಾರಿಗೆ ಇಲಾಖೆ ವತಿಯಿಂದ ತಾಲೂಕಿನಾದ್ಯಂತ ವಾಹನಗಳ ತಪಾಸಣೆ ನಡೆಸಿ, ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಪಘಾತಗಳನ್ನು ತಡೆಗಟ್ಟಲು ಕ್ರಮವಹಿಸಲಾಗುವುದು. ಈಗಾಗಲೇ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದ್ದು, ಅಪಘಾತಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿರುವ ಹೆದ್ದಾರಿಯಲ್ಲಿ ಹಲವೆಡೆ ಎಸ್ ಮಾದರಿಯ ತಿರುವುಗಳು ಹೆಚ್ಚಾಗಿದ್ದು, ಅದರ ಬದಲಾವಣೆಗೆ ಕ್ರಮವಹಿಸಲಾಗುವುದು, ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿ ವೇಗ ಮಿತಿ ಅನುಸರಿಸಿ, ತಿರುವುಗಳಲ್ಲಿ ಓವರ್‌ಟೇಕ್ ಮಾಡಬಾರದು, ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡುವಂತೆ ಕಿವಿಮಾತು ಹೇಳಿದರು.

ಆರ್‌ಟಿಒ ಅಧಿಕಾರಿಗಳಾದ ಎಲ್.ದೀಪಕ್, ಭೀಮಾಂಜನೇಯ, ಶಫಿವುದ್ದಿನ್ ಖಾನ್, ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಸಿಬ್ಬಂದಿ ಸಿದ್ದರಾಜು, ನಾಗರಾಜು, ಹೇಮಂತ್ ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net