ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ರಸ್ತೆ ಗುಂಡಿ

19kglphoto-4...
Published on

ಕೊಳ್ಳೇಗಾಲ: ಅಪಘಾತದ ಕೂಪವಾಗಿ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್‌ನ ರಾಷ್ಟ್ರೀಯ ಹೆದ್ದಾರಿ(209) ರಸ್ತೆ ಮಾರ್ಪಟಿದೆ.


ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂರ್ಪಕಿಸುವ ಮುಖ್ಯ ರಸ್ತೆ ಇದಾಗಿದೆ. ಪ್ರತಿ ನಿತ್ಯವೂ ಸಾರಿಗೆ ಬಸ್ಸ್, ಟಿಪ್ಪರ್, ಟ್ರಾೃಕ್ಟರ್, ಭಾರಿ ವಾಹನಗಳು ಸಂಚರಿಸುತ್ತವೆ. ಪರಿಣಾಮ ಸತ್ತೇಗಾಲ ಗ್ರಾಮದಿಂದ ಹ್ಯಾಂಡ್‌ಪೋಸ್ಟ್‌ಗೆ ತೆರಳುವ ರಸ್ತೆ ಮಧ್ಯೆ ಭಾರಿ ಗುಂಡಿ ಬಿದ್ದಿದ್ದು ಪ್ರಯಾಣಿಕರ ಜೀವಕ್ಕೆ ಕುತ್ತುತರುತ್ತಿದೆ.


ಕೆಲವು ತಿಂಗಳ ಹಿಂದಷ್ಟೆ ನರೀಪುರ ಗ್ರಾಮದಿಂದ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ವರೆಗೂ ಬಿದ್ದಿದ್ದ ಗುಂಡಿಗಳನ್ನು ಮುಚ್ಚಿಸಿ ರಸ್ತೆಗೆ ಡಾಂಬರು ಹಾಕಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಸತ್ತೇಗಾಲ ಹಾಗೂ ಹ್ಯಾಂಡ್‌ಪೋಸ್ಟ್ ಮಧ್ಯೆ ಸಿಗುವ ರಸ್ತೆಯ ಒಂದು ಕಡೆ ಡಾಂಬರೂ ಮೇಲೆದ್ದು ಭಾರಿ ಗುಂಡಿ ಬಿದ್ದಿದ್ದು ಸಂಚಾರಕ್ಕೆ ತೊಂದರೆಯಾಗಿದೆ.


ಈ ಗುಂಡಿ ಪಕ್ಕದಲ್ಲೆ ದೊಡ್ಡ ಮರವಿದ್ದು ಸದಾ ಗುಂಡಿಗೆ ನೆರಳು ಆವಸಿರುತ್ತದೆ. ಇದ್ದರಿಂದ ಈ ರಸ್ತೆಯಲ್ಲಿ ಸಂಚರಿಸುವ ಬೈಕ್ ಹಾಗೂ ಕಾರು ಪ್ರಯಾಣಿಕರಿಗೆ ರಸ್ತೆಯಲ್ಲಿ ಹಳ್ಳವಿರುವುದು ಕಾಣುವುದಿಲ್ಲ. ಪ್ರಯಾಣಿಕರು ಬಂದ ವೇಗದಲ್ಲೆ ಗುಂಡಿಗೆ ಬಿಡುವುದು ಹಾಗೂ ಹತ್ತಿರ ಬಂದಾಗ ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಗ್ರಾಮಾಂತರ ಠಾಣೆಯ ಪೊಲೀಸರು ತಾತ್ಕಾಲಿಕವಾಗಿ ಗುಂಡಿಗೆ ಮಣ್ಣನ್ನು ಮುಚ್ಚಿಸಿದ್ದರು. ಆದರೆ, ಮಳೆಯಿಂದ ಮಣ್ಣು ಗುಂಡಿಯಿಂದ ಮೇಲೆದಿದ್ದು ಮತ್ತೆ ಯತಾಸ್ಥತಿ ತಲುಪಿದೆ.


ಈ ಸ್ಥಳದಲ್ಲಿ ಇತ್ತೀಚೆಗೆ ಬೈಕ್‌ಗಳು ಹಾಗೂ ಕಾರುಗಳು ಹೆಚ್ಚಾಗಿ ಅಪಘಾತಕ್ಕೆ ಸಿಲುಕುತ್ತಿವೆ. ಅಂತೆಯೇ, ಗುಂಡಿ ತಪ್ಪಿಸಲು ಪ್ರಯತ್ನಿಸುವಾಗ ಶುಕ್ರವಾರ ಸರಣಿ ಅಪಘಾತ ನಡೆದಿದೆ. ಕೊಳ್ಳೇಗಾಲದ ಕಡೆಗೆ ಬರುತ್ತಿದ್ದ 3 ಮಾರುತಿ ಕಾರುಗಳು ಅಪಘಾತಕ್ಕೀಡಾಗಿದೆ. ಮೊದಲು ಬರುತ್ತಿದ್ದ ಕಾರಿನ ಸವಾರ ದಿಢೀರ್ ಕಂಡ ಗುಂಡಿ ತಪ್ಪಿಸಲು ಬ್ರೇಕ್ ಹೊಡೆದಿದ್ದು, ಹಿಂದೆ ಬರುತ್ತಿದ್ದ ಇನ್ನೇರಡು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಕೊಂಡು ಜಖಂ ಗೊಂಡಿದೆ.


ಇನ್ನಾದರೂ ಎಚ್ಚತ್ತು ಸಂಬಂಧಪಟ್ಟ ಇಲಾಖೆ ಮೃತ್ಯುಕೂಪವಾಗಿರುವ ಈ ರಸ್ತೆ ಗುಂಡಿ ಮುಚ್ಚಿಸಲು ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net