ಅಪಘಾತ ವಲಯದ ರಸ್ತೆ, ಸೇತುವೆ ಅಭಿವೃದ್ಧಿ

kdr bridge
ಕಡೂರು ತಾಲೂಕಿನ ಚನ್ನಾಪುರ-ಗಿರಿಬೊಮ್ಮನಹಳ್ಳಿ ರಸ್ತೆ ಹಾಗೂ ಬರಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಗುದ್ದಲಿಪೂಜೆ ನೆರವೇರಿಸಿದರು. ದೊಣ್ಣೆಕೋರನಹಳ್ಳಿ ಉಮೇಶ್, ಸುಮಾ, ಬಸವರಾಜನಾಯ್ಕ ಮತ್ತಿತರರಿದ್ದರು.
Published on

ಕಡೂರು: ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಕ್ಕೆ ಅಡಚಣೆ ಹಾಗೂ ಅಪಘಾತಕ್ಕೆ ಕಾರಣವಾಗುತ್ತಿದ್ದ ಕಿರಿದಾದ ಸೇತುವೆಗಳನ್ನು ಗುರುತಿಸಿ ಉನ್ನತೀಕರಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಯಗಟಿ ಹೋಬಳಿ ಪುರ ಗ್ರಾಮದಿಂದ ಚನ್ನಾಪುರ, ಗಿರಿಬೊಮ್ಮನಹಳ್ಳಿ, ದೊಣ್ಣೆಕೋರನಹಳ್ಳಿ ಸಂಪರ್ಕಿಸುವ ಬರಹಳ್ಳಕ್ಕೆ ಸೇತುವೆ ನಿರ್ಮಾಣ ಮತ್ತು ರಸ್ತೆ ಸುರಕ್ಷತಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಬರಹಳ್ಳಕ್ಕೆ ಸೇತುವೆ ಮತ್ತು ಎರಡೂ ಬದಿ ತಲಾ 1.ಕಿ.ಮೀ ಡಾಂಬರ್ ರಸ್ತೆಯನ್ನು ಒಟ್ಟು 4.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ಕಳೆದ ವರ್ಷ 23 ಅಪಘಾತ ಸಂಭವಿಸಿ ಸಾವು-ನೋವುಗಳು ಸಂಭವಿಸಿವೆ. ಪೊಲೀಸ್ ವರದಿ ಪ್ರಕಾರ ಇದು ಅಪಘಾತ ವಲಯ ಎಂದು ಗುರುತಿಸಲಾಗಿದೆ ಎಂದರು.

ಇದೇ ರೀತಿ ಕ್ಷೇತ್ರದಲ್ಲಿ ಮೂರು ಸೇತುವೆಗಳನ್ನು ಗುರುತಿಸಿದ್ದು ಎಮ್ಮೆದೊಡ್ಡಿ, ರಂಗೇನಹಳ್ಳಿ ಮತ್ತು ಕರೇಕಲ್ಲಹಳ್ಳಿ-ಸೀತಾಪುರ ಮಾರ್ಗದಲ್ಲೂ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಬರಹಳ್ಳ ಸೇತುವೆ ನಿರ್ಮಾಣದ ನಂತರ ಲಕ್ಷ್ಮೀಪುರ, ಚನ್ನಾಪುರ, ಗಿರಿಬೊಮ್ಮನಹಳ್ಳಿ, ದೊಣ್ಣೆಕೋರನಹಳ್ಳಿ ಹಾಗೂ ಚೌಳಹಿರಿಯೂರು ಸಂಪರ್ಕ ಸುಲಭವಾಗಲಿದೆ. ಹಿಂದಿನ ಜನಪ್ರತಿನಿಧಿಗಳು ಗ್ರಾಮಗಳ ಒಳ ರಸ್ತೆಗಳಿಗೆ ಒತ್ತು ನೀಡುತ್ತಿರಲಿಲ್ಲ. ನನ್ನ ಅವಧಿಯಲ್ಲಿ 200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಿದ್ದೇನೆ ಎಂದರು.

ಪುರ ಗ್ರಾಪಂ ಅಧ್ಯಕ್ಷೆ ಸುಮಾ ಮಹೇಶ್, ಉಪಾಧ್ಯಕ್ಷ ಅಶೋಕ್, ಯಗಟಿ ಗ್ರಾಪಂ ಅಧ್ಯಕ್ಷೆ ಜ್ಯೋತಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದೊಣ್ಣೆಕೋರನಹಳ್ಳಿ ಉಮೇಶ್, ಗ್ರಾಪಂ ಸದಸ್ಯೆ ಗಾಯತ್ರಿ, ಪಿಡಬ್ಲ್ಯುಡಿ ಎಇಇ ಬಸವರಾಜನಾಯ್ಕ, ಗೋವಿಂದಪ್ಪ, ಕೋಡಿಹಳ್ಳಿ ಸಿದ್ದಪ್ಪ, ಯಗಟಿಪುರ ಪ್ರಸನ್ನ, ಗುತ್ತಿಗೆದಾರ ಹಾಲಪ್ಪ, ಮಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net