

ವಿಜಯವಾಣಿ ಸುದ್ದಿಜಾಲ ಧಾರವಾಡ
ಲಾರಿ ಹಾಗೂ ಆಟೋ ಮಧ್ಯೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಇಲ್ಲಿನ ಕೆಲಗೇರಿ ರಸ್ತೆ ಸಂಪಿಗೆನಗರ ಬಳಿ ಸಂಭವಿಸಿದೆ.
ಕೆಲಗೇರಿಯ ರಮೇಶ ಹಂಚಿನಮನಿ (35) (ಆಟೋ ಚಾಲಕ), ಮರೆವ್ವ ಹಂಚಿಮನಿ (55), ಪ್ರಣವ ಹಂಚಿನಮನಿ (7) ಮೃತಪಟ್ಟಿದ್ದಾರೆ. ರೇಣುಕಾ (25) ಹಾಗೂ ಪೃಥ್ವಿ (4) ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಂಚಿನಮನಿ ಕುಟುಂಬಸ್ಥರು ನಸುಕಿನ ಜಾವದಲ್ಲಿ ರೈಲು ನಿಲ್ದಾಣಕ್ಕೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ರಸ್ತೆ ಮಧ್ಯೆ ಮಲಗಿದ್ದ ಬಿಡಾಡಿ ದನಗಳನ್ನು ತಪ್ಪಿಸಲು ಹೋಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಿಯರ ಪ್ರತಿಭಟನೆ: ರಸ್ತೆಗಳಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಾಗಿದೆ. ಇದಲ್ಲದೆ ಸಾರಿಗೆ ಬಸ್ ಹಾಗೂ ಲಾರಿಗಳ ವೇಗದ ಸಂಚಾರ ಅಪಘಾತಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಡಾಡಿ ದನಗಳ ತೆರವು ಹಾಗೂ ರಸ್ತೆಯಲ್ಲಿ ವೇಗದ ಮಿತಿ ನಿಗದಿಪಡಿಸುವಂತೆ ಸ್ಥಳಿಯ ನಿವಾಸಿಗಳು ಪ್ರತಿಭಟನೆ ನಡೆಸಿದರು. ಹೊಸ ಬಸ್ ನಿಲ್ದಾಣದಿಂದ ನರೇಂದ್ರ ಬೈಪಾಸ್ ಮೂಲಕ ಬಸ್ಗಳ ಸಂಚಾರ ಬದಲಿಸುವಂತೆ ಆಗ್ರಹಿಸಿ ಕೆಲಗೇರಿ ಕೆರೆ ಸೇತುವೆ ಬಳಿ ರಸ್ತೆ ಬಂದ್ ಮಾಡಿ ಸುಮಾರು 5 ಗಂಟೆ ಕಾಲ ಪ್ರತಿಭಟನೆ ನಡೆಸಿದರು. ನಂತರ ಶಾಸಕ ಅರವಿಂದ ಬೆಲ್ಲದ ಹಾಗೂ ಪಾಲಿಕೆ ಅಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.