

ಮೈಸೂರು: ಅಪಘಾತ ಮಾಡಲಾಗಿದೆ ಎನ್ನುವ ನೆಪದಲ್ಲಿ ವಾಹನ ಚಾಲಕರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯನ್ನು ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ.
ರಾಜೇಂದ್ರನಗರದ ಜಮೀಲ್ ಖಾನ್ (32) ಬಂಧಿತ ಆರೋಪಿ. ಬಂಧಿತನಿಂದ 40 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸುತ್ತಿದ್ದ ಸ್ಕೂಟರ್, ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ರಮೇಶ್ ಬಾನೋತ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಎಸ್‌ಆರ್‌ಪಿ ನಿವೃತ್ತ ಎಎಸ್‌ಐ ದೇವಯ್ಯ ಅವರು ಸೆ.2ರಂದು ಕಾರಿನಲ್ಲಿ ಬೋಗಾದಿ ಬಳಿ ರಿಂಗ್‌ರೋಡ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಸ್ಕೂಟರ್‌ನಲ್ಲಿ ಬಂದು ಕಾರನ್ನು ಅಡ್ಡ ಹಾಕಿದ ಆರೋಪಿ, ಮಾರ್ಗಮಧ್ಯೆ ರಸ್ತೆ ಅಪಘಾತ ಮಾಡಿದ್ದಿರಾ. ಇದರಿಂದ ನನ್ನ ಸ್ನೇಹಿತನ ಕಾಲು ಮುರಿದಿದೆ. ಆಸ್ಪತ್ರೆಗೆ ಸೇರಿಸಲು ಹಣ ನೀಡಬೇಕು. ಕೊಡದಿದ್ದರೆ ಜನರಿಂದ ಗಲಾಟೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದನು.
ಗಲಾಟೆ ಮಾಡಿದ್ದಲ್ಲದೆ, ಹತ್ತಿರದ ಎಟಿಎಂ ಕೇಂದ್ರಕ್ಕೆ ದೇವಯ್ಯ ಅವರನ್ನು ಕರೆದುಕೊಂಡು ಹೋಗಿ ಅವರಿಂದ 40 ಸಾವಿರ ರೂ. ಡ್ರಾ ಮಾಡಿಸಿಕೊಂಡು ತೆರಳಿದ್ದನು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಕುವೆಂಪುನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ ಐದಕ್ಕೂ ಹೆಚ್ಚು ಕೃತ್ಯ:
ವಯಸ್ಸಾದವರು ಕಾರು ಚಾಲನೆ ಮಾಡಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಅವರ ಕಾರನ್ನು ಬೆನ್ನತ್ತುತ್ತಿದ್ದ ಖದೀಮ, ಕಾರಿನ ಬಳಿ ಹೋಗಿ ಜೋರಾಗಿ ಸದ್ದು ಮಾಡಿ ಬಳಿಕ ಕಾರನ್ನು ಅಡ್ಡ ಹಾಕಿ, ನಿಮ್ಮ ಕಾರು ನಮ್ಮ ಸ್ನೇಹಿತನಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಆತ ಗಾಯಗೊಂಡಿದ್ದಾನೆ. ಆತನಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಗಲಾಟೆ ಮಾಡಿ ಹಣ ಸುಲಿಗೆ ಮಾಡುತ್ತಿದ್ದನು ಎಂದು ರಮೇಶ್ ಬಾನೋತ್ ವಿವರಿಸಿದರು.
ಬಂಧಿತ ಆರೋಪಿ ಇದೇ ರೀತಿ ಅಪಘಾತವಾಗಿದೆ ಎಂದು ಚಾಲಕರನ್ನು ಬೆದರಿಸಿದ ಐದಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಮೂರು ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಒಂದು ತಿಂಗಳಿಂದ ಅಪಘಾತ ಮಾಡಿ ಆಕ್ಸಿಡೆಂಟ್ ಮಾಡಿದ್ದೀರಾ ಎಂದು ಕಾರು ಚಾಲಕರನ್ನು ಹೆದರಿಸಿ ಹಣ ಸುಲಿಗೆ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪದೇ ಪದೆ ಬಂದ ಹಲವು ದೂರುಗಳ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಕೆಲವರು ಈ ಬಗ್ಗೆ ದೂರು ನೀಡಿದ್ದರೆ, ಕೆಲವರು ಸುಮ್ಮನಾಗಿದ್ದಾರೆ. ಆದ್ದರಿಂದ, ಯಾರೂ ಹೆದರದೆ ಈ ರೀತಿಯಲ್ಲಿ ಯಾರಿಗಾದರೂ ಸಮಸ್ಯೆಯಾಗಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದರೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಡಿಸಿಪಿ ಎಸ್.ಜಾಹ್ನವಿ, ಎಸಿಪಿ ಗಂಗಾಧರಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುವೆಂಪುನಗರ ಠಾಣೆ ಇನ್ಸ್‌ಪೆಕ್ಟರ್ ಎಲ್.ಅರುಣ್, ಎಸ್‌ಐಗಳಾದ ಎಸ್.ಪಿ.ಗೋಪಾಲ್, ಎಂ.ರಾಧಾ, ಸಿಬ್ಬಂದಿ ವಿ.ಆನಂದ್, ಎಂ.ಪಿ.ಮಂಜುನಾಥ್, ಹಜರತ್, ಪುಟ್ಟಪ್ಪ, ಸುರೇಶ್, ನಾಗೇಶ, ಅಮೋಘ್, ಕುಮಾರ್ ಇತರರು ಇದ್ದರು.