

ಚಿತ್ರದುರ್ಗ: ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ, ರಾಜ್ಯಹೆದ್ದಾರಿಗಳು, ಜಿಲ್ಲಾ ಮುಖ್ಯ ಹಾಗೂ ಗ್ರಾಮೀಣ ರಸ್ತೆಗಳನ್ನು ಸಂಪರ್ಕಿಸುವ ರಸ್ತೆ, ಜಂಕ್ಷನ್,ತಿರುವುಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಅಪಘಾತಗಳನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿ ಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ರಸ್ತೆಗಳು, ಬ್ಲಾಕ್‌ಸ್ಪಾಟ್‌ಗಳಲ್ಲಿ ಸೂ ಚನಾ ಫಲಕಗಳು, ಹಂಪ್ಸ್, ರಂಬಲ್ ಸ್ಟ್ರೀಪ್ಸ್, ಕ್ಯಾಟ್‌ಐಸ್ ಮತ್ತು ಬ್ಲಿಂಕರ್ಸ್ ಅಳವಡಿಕೆ ಸೇರಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ನಗರದ ಕೆಳಗೋಟೆ ಹೌಸಿಂಗ್ ಬೋರ್ಡ್ ಹತ್ತಿರ ಹೈಮಾಸ್ಟ್ ದೀಪ ಅಳವಡಿಸಬೇಕು. ಜೆಎಂಐಟಿ ಕಾಲೇಜು ಬಳಿ ಸ್ಕೈವಾಕ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕು ಎಂದರು.
ಹೌಸಿಂಗ್ ಬೋರ್ಡ್ ಹತ್ತಿರ ಕ್ಯಾಟ್‌ಐ ಅಳವಡಿಸಲಾಗುವುದು. ಸ್ಕೈವಾಕ್‌ಗೆ ಟೆಂಡರ್ ಕರೆಯಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಇಇ ನಾಗರಾಜ್ ತಿಳಿಸಿದರು.
ಹಿರಿಯೂರು ನಗರಕ್ಕೆ ಒಳ ಬರುವ ಮತ್ತು ಹೊರ ಹೋಗುವ ರಸ್ತೆ ಎರಡೂ ಬದಿಗಳಲ್ಲಿ ಅನಧಿಕೃತ ಗೂಂಡಂಗಡಿಗಳು, ಲಾರಿಗಳ ಪಾರ್ಕಿಂಗ್‌ನಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ರಾ.ಹೆ. ಟೋಲ್‌ಗಳ ಬಳಿ ಗೂಡಂಗಡಿಗಳನ್ನು ತೆರವುಗೊಳಿಸಬೇಕು. ಪಾರ್ಕಿಂಗ್ ಮಾಡುವ ವಾಹನಗಳನ್ನು ವಶಕ್ಕೆ ಪಡೆಯುವಂತೆ ರಾ.ಹೆ.ಪ್ರಾಧಿಕಾರದ ಅಧಿಕಾರಿಗಳಿಗೆ ಡಿಸಿ ತಾಕೀತು ಮಾಡಿದರು.
ಇದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳಿರುವ ಉಪ ಸಮಿತಿ ರಚನೆ ಹಾಗೂ ಅನಧಿಕೃತ ಅಂಗಡಿಗಳಿಗೆ ನೀರು, ವಿದ್ಯುತ್ ಸರಬ ರಾಜು ತಡೆಹಿಡಿಯಬೇಕೆಂದರು.
ಜಿಲ್ಲೆಯಲ್ಲಿ ಮೂರು ರಾ.ಹೆ.ಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಬೇಕಿದೆ. ಇದಕ್ಕಾಗಿ ಅಗತ್ಯವಿರುವ ರಸ್ತೆ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದರು.
ಡಿಪಿಆರ್‌ಗೆ ಅನುಮೋದನೆ ಸಿಗುತ್ತಿದ್ದಂತೆ ನಗರದ ಗಾಂಧಿ ವೃತ್ತದ ಬಳಿ ಸುಸಜ್ಜಿತ ಬಹುಹಂತದ ಪಾರ್ಕಿಂಗ್ ಕಟ್ಟಡ ನಿರ್ಮಾಣವಾ ಗಲಿದೆ. ಸಂತೆಹೊಂಡ ಪಕ್ಕದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ನೆಲ ಮಹಡಿಯಲ್ಲಿ ಪಾರ್ಕಿಂಗ್ ಹಾಗೂ ಮೇಲ್ಭಾಗದಲ್ಲಿ ತರಕಾರಿ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮಾಹಿತಿ ನೀಡಿದರು.
ಚಿತ್ರದುರ್ಗದ 27 ಆಟೋ ನಿಲ್ದಾಣಗಳ ಪೈಕಿ 12 ರ ಕಾಮಗಾರಿ ಪೂರ್ಣಗೊಂಡಿವೆ. ಬಾಕಿ ನಿಲ್ದಾಣಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಅವರು ತಿಳಿಸಿದರು.
ಬಹಳಷ್ಟು ಟ್ರ್ಯಾಕ್ಟರ್‌ಗಳಿಗೆ ರಿಫ್ಲೆಕ್ಟರ್ ಸ್ಟಿಕರ್ ಇಲ್ಲದೆ ಅಪಘಾತಗಳು ಸಂಭವಿಸುತ್ತಿವೆ ಡಿಸಿ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 25,205 ಟ್ರಾಕ್ಟರ್, 151 ವಾಣಿಜ್ಯ ಟ್ರ್ಯಾಕ್ಟರ್‌ಗಳಿವೆ. ಆರ್‌ಸಿ ಅವಧಿ ಮುಗಿದ ಹಳೆ ಟ್ರಾಕ್ಟರ್‌ಗಳು ನವೀಕರಣಕ್ಕೆ ಬಾರದೆ ಸಂಚರಿಸುತ್ತಿವೆ ಎಂದು ಆರ್‌ಟಿಒ ಭರತ್ ಎಂ. ಕಾಳಿಸಿಂಗೆ ತಿಳಿಸಿದರು.
ಕೃಷಿ ಉಪಯೋಗಕ್ಕೆಂದು ನೋಂದಣಿಯಾಗಿರುವ ಟ್ರ್ಯಾಕ್ಟರ್‌ಗಳನ್ನು ವಾಣಿಜ್ಯಉದ್ದೇಶಕ್ಕಾಗಿ ಬಳಸುತ್ತಿರುವುದು ಕಂಡುಬಂದಿದೆ. ಹಂತ, ಹಂತವಾಗಿ ಇಂತಹ ಟ್ರ್ಯಾಕ್ಟರ್‌ಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಲಾಗುವುದು ಎಂದರು.
ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಡಿವೈಎಸ್‌ಪಿಗಳಾದ ರಾಜಣ್ಣ, ಶಿವಕುಮಾರ್ ಇತರರು ಇದ್ದರು.
-----------
ಡಿವೈಡರ್ ವರದಿಗೆ ಸೂಚನೆ
ಚಿತ್ರದುರ್ಗದ ಡಿವೈಡರ್‌ಗಳ ಕುರಿತಂತೆ ಸಂಪೂರ್ಣ ವರದಿ ನೀಡುವಂತೆ ಡಿಸಿ ತಿಳಿಸಿದರು.
ತುರುವನೂರು ರಸ್ತೆ ಅಂಡರ್‌ಪಾಸ್ ಹತ್ತಿರವಿರುವ ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಪಿಡಬ್ಲೂೃಡಿ ಇಇ ಅವರಿಗೆ ಸೂಚಿಸಿದರು. ನಗರದ ಬಾಪೂಜಿ ಕಾಲೇಜು ಬಳಿ ಸ್ಕೈವಾಕ್‌ಗೆ ವಿರೋಧವಿದೆ ಎಂದು ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ಹೇಳಿದರು. ಪೊಲೀಸರ ಸಹಕಾರದೊಂದಿಗೆ ಈ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಹೇಳಿದರು.
ಚಿತ್ರದುರ್ಗದಲ್ಲಿ ಟ್ರಾಫಿಕ್ ಸಿಗ್ನಲ್ ಕಾರ್ಯನಿರ್ವಹಿಸುತ್ತಿಲ್ಲ. ನಗರಸಭೆ ಇದನ್ನು ನಿರ್ವಹಿಸಬೇಕಿದೆ ಎಂದು ಎಸ್‌ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು. ಚಿತ್ರದುರ್ಗ ನಗರ ಹಾಗೂ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಪೊಲೀಸರ ಸಲಹೆಯಂತೆ ಶಾಶ್ವತವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಡಿಸಿ ತಿಳಿಸಿದರು.
-----
ಅರೆಸ್ಟ್ ಮಾಡಿ
ಎನ್‌ಎಚ್ 48ರ ಚಿತ್ರದುರ್ಗ-ಬೆಂಗಳೂರು ರಸ್ತೆಯಲ್ಲಿ ಗೊರ್ಲಡಕು ಗೇಟ್ ಜೆಜೆಹಳ್ಳಿ ರಸ್ತೆ ಕಾಮಗಾರಿಯನ್ನು 2 ದಿನದೊಳಗೆ ಪೂ ರ್ಣಗೊಳಿಸದಿದ್ದರೆ ಸಂಬಂಧಿಸಿದ ಗುತ್ತಿಗೆದಾರರನ್ನು ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಡಿಸಿ ಸೂಚಿಸಿದರು.
ರಸ್ತೆ ಸಮರ್ಪಕವಾಗಿಲ್ಲವಾದರೆ ಟೋಲ್ ಸಂಗ್ರಹಿಸಬಾರದೆಂದು ಇತ್ತೀಚೆಗೆ ನ್ಯಾಯಾಲಯ ತೀರ್ಪು ನೀಡಿದೆ. ಹೀಗಿದ್ದಾಗ, ರಸ್ತೆ ಸರಿ ಇಲ್ಲದ ಕಡೆಗಳಲ್ಲಿ ಟೋಲ್ ಏಕೆ ಸಂಗ್ರಹಿಸುತ್ತೀರಿ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು.
-----