

ಮೈಸೂರು: ವಾಹನ ಚಾಲನೆ ಮಾಡುವ ಸಂದರ್ಭ ಪ್ರತಿಯೊಬ್ಬರ ಜೀವ ಹಾಗೂ ಜೀವನ ಮುಖ್ಯವೆಂಬುದು ಗಮನದಲ್ಲಿ ಇರಲಿ ಎಂದು ಡಿಸಿಪಿ ಪ್ರದೀಪ್ ಗುಂಟಿ ಹೇಳಿದರು.
ನಗರದ ಕೀಲು ಮತ್ತು ಮೂಳೆ ವೈದ್ಯರ ಸಂಘದ ವತಿಯಿಂದ ಜೆ.ಕೆ.ಮೈದಾನದ ಅಮೃತ ಮಹೋತ್ಸವದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಕೀಲು ಮತ್ತು ಮೂಳೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪಘಾತ ಸಂದರ್ಭ ಮನುಷ್ಯನಿಗೆ ಕೊಡುವ ಬೆಲೆಯನ್ನು ಪ್ರಾಣಿಗಳಿಗೂ ಕೊಡಬೇಕು. ಪ್ರತಿಯೊಂದು ಜೀವಕ್ಕೂ ಅದರದೇ ಆದ ಬೆಲೆ ಇರುತ್ತದೆ ಎಂದರು.
ಅಪಘಾತವಾದಾಗ ಗಾಯಾಳು ಮತ್ತು ಗಾಯಾಳುವಿನ ಜತೆ ಇರುವವರು ಹೆದರಿಕೆ ಹಾಗೂ ಗಾಬರಿಯಿಂದ ಆತಂಕಪಡಬಾರದು. ಸಮಸ್ಯೆಯನ್ನು ಬಗೆಹರಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವ ಮೂಲಕ ಜೀವ ಉಳಿಸಬೇಕು. ಅಪಘಾತದಿಂದ ಮನುಷ್ಯನಾಗಲಿ, ಪ್ರಾಣಿಯಾಗಲಿ ಮೃತಪಟ್ಟಾಗ ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಜೀವ ಉಳಿಸಿಕೊಳ್ಳಲು ಮುಂದಾಗಬೇಕು ಎಂದರು.
ಅಪಘಾತವಾದಾಗ ಹೆದರಿಕೊಂಡು ಕುಳಿತರೆ ಪ್ರಾಣ ಹಾನಿಯೂ ಆಗಬಹುದು. ಆದ್ದರಿಂದ ಆ ಸಮಯದಲ್ಲಿ ತುರ್ತಾಗಿ ಸ್ಪಂದಿಸುವ ಮನೋಭಾವ ಮೈಗೂಡಿಸಿಬೇಕು. ಧೈರ್ಯದಿಂದ ಪ್ರಾಣ ಉಳಿಸಿಕೊಳ್ಳಬಹುದು ಎಂದರು.
ಮೈಸೂರು ಅರ್ಥೋಪೆಡಿಕ್ ಅಸೋಶಿಯೇಷನ್ ಅಧ್ಯಕ್ಷ ಡಾ.ನೀಳನಗೌಡ ವಿ.ಪಾಟೀಲ್ ಮಾತನಾಡಿ, ಕಳೆದ ವರ್ಷ ದೇಶದಲ್ಲಿ 4.50 ಲಕ್ಷ ಅಪಘಾತವಾಗಿದ್ದು, ಅದರಲ್ಲಿ ತುರ್ತಾಗಿ ಪ್ರಥಮ ಚಿಕಿತ್ಸೆ ಸಿಗದೆ 1.50 ಲಕ್ಷ ಜನ ಜೀವ ಕಳೆದುಕೊಂಡಿದ್ದಾರೆ. ಅಪಘಾತವಾದಾಗ ಗಾಯಾಳುಗಳಿಗೆ ಸರಿಯಾಗಿ ಪ್ರಥಮ ಚಿಕಿತ್ಸೆ ಕೊಡಿಸಲು ಸುತ್ತಲು ಇರುವ ವ್ಯಕ್ತಿಗಳು ನೆರವಾಗಬೇಕು ಎಂದರು.
ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಎಚ್.ಎನ್.ಡಾ.ದಿನೇಶ್, ಪ್ರಾಂಶುಪಾಲೆ ಕೆ.ಆರ್.ದಾಕ್ಷಾಯಿಣಿ, ಮೇಜರ್ ಡಾ.ಅಭಿಜಿತ್, ಉಪಾಧ್ಯಕ್ಷ ಡಾ.ರವೀಂದ್ರನಾಥ್, ಕಾರ್ಯದರ್ಶಿ ಡಾ.ಜಿ.ಆರ್.ಅರುಣ್, ಮುಳ್ಳೂರು ನಂಜುಂಡಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಕಲ್ಪಿತ ಪ್ರದರ್ಶನದಿಂದ ಜಾಗೃತಿ
ರಸ್ತೆ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಕರ್ತವ್ಯ ಮತ್ತು ಪ್ರಥಮ ಚಿಕಿತ್ಸೆ ಕುರಿತು ಮೈಸೂರು ಆರ್ಥೋಪಿಡಿಕ್ ಅಸೋಸಿಯೇಷನ್‌ನಿಂದ ‘ಒಬ್ಬರು ಒಂದು ಜೀವ ಉಳಿಸಿ’ ಘೋಷವಾಕ್ಯದಡಿ ಅಪಘಾತ ಪ್ರಾತ್ಯಕ್ಷಿಕೆ ಅಭಿಯಾನ ನಡೆಯಿತು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಮೂಳೆ ವೈದ್ಯರು, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮೋಟಾರ್ ಬೈಕ್‌ನಲ್ಲಿ ಬಿದ್ದು ಮೂಳೆ ಮುರಿತ ಮತ್ತು ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಯವಕನೊಬ್ಬನಿಗೆ ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರು ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಎನ್ನುವ ಬಗ್ಗೆ ವಿದ್ಯಾರ್ಥಿಗಳು ಕಲ್ಪಿತ ಪ್ರದರ್ಶನ ನೀಡಿದರು.
ದೇಶದಲ್ಲಿ ವರ್ಷಕ್ಕೆ ಸುಮಾರು 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸೂಕ್ತ ಪ್ರಥಮ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುತ್ತಿದ್ದು, ಅಪಘಾತ ನಡೆದಾಗ ಮೊಬೈಲ್‌ನಿಂದ ಚಿತ್ರೀಕರಣ ಮಾಡದೆ ಸಹಾಯಕ್ಕೆ ಮುಂದಾಗಬೇಕು. ಗಾಯಗೊಂಡ ವ್ಯಕ್ತಿಗೆ ನೀರು ಕುಡಿಸಬಾರದು. ಅಂಗಾತ ಮಲಗಿಸಿ ರಕ್ತಸ್ರಾವ ಆಗುತ್ತಿರುವ ಜಾಗಕ್ಕೆ ಬಟ್ಟೆಯನ್ನು ಕಟ್ಟಿ ಮೂಳೆ ಮುರಿದ್ದಿದರೆ ಕಾಲು, ಅಥವಾ ಕೈಯನ್ನು ಸ್ಥಳದಲ್ಲಿ ಲಭ್ಯವಿರುವ ಕಡ್ಡಿಗಳ ಸಹಾಯದಿಂದ ನೇರವಾಗಿ ಕಟ್ಟಿ ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಬೇಕು. ಸಹಾಯ ಮಾಡಿದ ವ್ಯಕ್ತಿಗಳಿಗೆ ಪೊಲೀಸರು ಯಾವುದೇ ಕಿರುಕುಳ ನೀಡುವುದಿಲ್ಲ ಎಂಬ ಜಾಗೃತಿ ಮೂಡಿಸಲಾಯಿತು.