ಅಪಘಾತ ತಡೆಯಲು ಪೊಲೀಸ್ ಇಲಾಖೆಯಿಂದ ರಿಫ್ಲೆಕ್ಟಿವ್ ಸ್ಟಿಕ್ಟರ್ ಅಳವಡಿಕೆ

04_HSN_06
Published on

ಹಾಸನ: ರಾತ್ರಿಯ ವೇಳೆ ವಾಹನಗಳ ಹಿಂಬದಿಯಲ್ಲಿ ರಿಫ್ಲೆಕ್ಟರ್ ಸ್ಟಿಕ್ಕರ್ ಇಲ್ಲದ ಪರಿಣಾಮ ಅಪಘಾತಗಳು ಸಂಭವಿಸುತ್ತಿರುವುದನ್ನು ಮನಗಂಡ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯಾದ್ಯಂತ ವಾಹನಗಳ ಹಿಂಬದಿಗೆ ರಿಫ್ಲೆಕ್ಟಿವ್ ಸ್ಟಿಕ್ಟರ್ ಅಳವಡಿಸುವ ಅಭಿಯಾನ ನಡೆಸಿ ವಾಹನಗಳ ಚಾಲಕರು ಮತ್ತು ಮಾಲೀಕರಲ್ಲಿ ಜಾಗೃತಿ ಮೂಡಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ನೀರು ಸರಬರಾಜು ಟಾಂಕರ್‌ಗಳು, ಎತ್ತಿನಗಾಡಿಗಳು, ಟ್ರಾೃಕ್ಟರ್‌ಗಳ ಸೇರಿದಂತೆ ಸುಮಾರು 545 ವಾಹನಗಳಿಗೆ ರಿಫ್ಲೆಕ್ಟಿವ್ ಸ್ಟಿಕ್ಕರ್ ಅಳವಡಿಸಲಾಗಿದೆ.

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎರಡು ಪ್ರತ್ಯೇಕ ಅಪಘಾತಗಳಿಗೆ ರಿಫ್ಲೆಕ್ಟಿವ್ ಸ್ಟಿಕ್ಕರ್ ಇಲ್ಲದಿರುವುದೇ ಕಾರಣವಾಗಿತ್ತು. ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ರಾತ್ರಿ ವೇಳೆ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಟ್ರಾೃಕ್ಟರ್‌ಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದರು. ಟ್ರಾೃಕ್ಟರ್ ಹಿಂಬದಿಯಲ್ಲಿ ರಿಫ್ಲೆಕ್ಟಿವ್‌ಸ್ಟಿಕ್ಕರ್ ಇದ್ದಿದ್ದರೆ ಈ ಅಪಘಾತ ತಪ್ಪಿಸಬಹುದಿತ್ತು ಎಂಬುದು ಎಸ್ಪಿ ಹರಿರಾಮ್ ಶಂಕರ್ ಅಭಿಪ್ರಾಯವಾಗಿದೆ.

ರಿಫ್ಲೆಕ್ಟಿವ್ ಸ್ಟಿಕರ್ ಅಳವಡಿಸುವ ಕಾರ್ಯ ಮುಂದುವರಿಯಲಿದೆ. ಆದರೆ ವಾಹನಗಳ ಮಾಲೀಕರು ಮತ್ತು ಚಾಲಕರು ಸ್ವಯಂ ಜಾಗೃತಿ ಹೊಂದಿ ತಮ್ಮ ವಾಹನಗಳ ಹಿಂಬದಿಗೆ ರಿಫ್ಲೆಕ್ಟಿವ್ ಸ್ಟಿಕ್ಕರ್ ಅಳವಡಿಸಿದೆ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ ಎಂದು ಎಸ್ಪಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net