ಹೊಳೆನರಸೀಪುರ: ತಾಲೂಕು ಕಟ್ಟೆಬೆಳಗುಲಿ ಗ್ರಾಮದಲ್ಲಿ ಸೋಮವಾರ ರಾತ್ರಿ ಶ್ರೀರಾಮನಗರ ನಿವಾಸಿ ನೀಲಕಂಠಪ್ಪ ಎಂಬುವರು ರಸ್ತೆಯ ಎಡಬದಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ನೀಲಕಂಠಪ್ಪ (47) ಮತ್ತು ಕೆಳಗೆ ಬಿದ್ದ ಬೈಕ್ ಸವಾರ ಮನೋರಂಜಿತ್ (35) ಇಬ್ಬರೂ ಮೃತಪಟ್ಟಿದ್ದಾರೆ.
ಬೈಕ್ ಗುದ್ದಿದ ರಭಸಕ್ಕೆ ಬೈಕ್ ಸವಾರ ಮನೋರಂಜಿತ್ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ನೀಲಕಂಠಪ್ಪ ಚಿಕಿತ್ಸೆ ಫಲಕಾರಿ ಆಗದೆ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಬೈಕ್ ಹಿಂಬದಿ ಸವಾರ ಸತೀಶ ತೀವ್ರವಾಗಿ ಗಾಯಗೊಂಡು ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನೀಲಕಂಠಪ್ಪ ಅವರ ಪತ್ನಿ ಸುಮಿತ್ರ ನೀಡಿದ ದೂರಿನ ಮೇರೆಗೆ ಹೊಳೇನರಸೀಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.