ಅಪ ಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ

YLB
Published on

ಯಲಬುರ್ಗಾ (ಕೊಪ್ಪಳ):ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವವ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಪಟ್ಟಣದ ತಹಸಿಲ್ ಕಚೇರಿಯ ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್ ಮಾತನಾಡಿ, ಸಿ.ಎಸ್.ಷಡಕ್ಷರಿ ಅವರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರ ನೇತೃತ್ವದಲ್ಲಿ ಸರ್ಕಾರಿ ನೌಕರರ ಅನೇಕ ಬೇಡಿಕೆ ಈಡೇರಿವೆ. ಅಲ್ಲದೇ ನೌಕರರ ಧ್ವನಿಯಾಗಿ ಸಂಘ ಕೆಲಸ ಮಾಡುತ್ತಿದೆ. ನೌಕರರ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಸಂಘದ ಎಲ್ಲಾ ಹಂತದ ಪದಾಧಿಕಾರಿಗಳ ಮೇಲೆ ವ್ಯವಸ್ಥಿತ ಪಿತೂರಿ ಮಾಡಿ ಸಂಘಕ್ಕೆ ಹಾನಿ ಮಾಡಲಾಗುತ್ತಿದೆ.

ನಕಲಿ ದಾಖಲೆ ಸೃಷ್ಟಿಸಿ ಸಂಘಕ್ಕೆ ಹಾನಿಯುಂಟು ಮಾಡಿರುವುದರಿಂದ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಸುಳ್ಳು ದೂರು ನೀಡುವ ಮೂಲಕ ಆಧಾರ ರಹಿತ ಆರೋಪಗಳನ್ನು ಮಾಡಿ ಅಪಪ್ರಚಾರ ಮಾಡುತ್ತಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಧೀನ ಕಾರ್ಯದರ್ಶಿ ಶಾಂತಾರಾಮ, ಸರ್ಕಾರದ ಸಚಿವಾಲಯದ ಶಾಖಾಧಿಕಾರಿ ಗುರುಸ್ವಾಮಿ, ರಾಯಚೂರು ಪಶು ಆಸ್ಪತ್ರೆ ಅಧಿಕಾರಿ ಮೆಹಬೂದ್ ಪಾಷಾ, ಭೂಮಾಪನ ಇಲಾಖೆಯ ಶಿವರುದ್ರಯ್ಯ, ಅವ್ವೇರಹಳ್ಳಿ ಪದವಿ ಕಾಲೇಜು ಉಪನ್ಯಾಸಕ ನಿಂಗೇಗೌಡ್ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡುವಂತೆ ಆಗ್ರಹಿಸಿದರು.

ಪದಾಧಿಕಾರಿಗಳಾದ ದೇವಪ್ಪ ಮುಗಳಿ, ದಾದಾಪೀರ್, ಅಶೋಕ ಮಾಲಿಪಾಟೀಲ್, ವಿಜಯಕುಮಾರ ಗುಂಡೂರ, ಸಮೀರಕುಮಾರ, ಶಿವಕುಮಾರ, ಮಲ್ಲಿಕಾರ್ಜುನ ಶಾಸ್ತ್ರೀಮಠ, ಶರಣಪ್ಪ ಕೊಪ್ಪದ, ಶಂಭುಲಿಂಗ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net