

ಚಿಕ್ಕಮಗಳೂರು: ಬಿಜೆಪಿ ಮುಖಂಡ ಉಪ್ಪಳ್ಳಿಯ ಅನ್ವರ್ ಹತ್ಯೆ ಪ್ರಕರಣದ ಆರೋಪಿಗಳನ್ನು ಇನ್ನೆರಡು ತಿಂಗಳ ಒಳಗೆ ಬಂಧಿಸದಿದ್ದಲ್ಲಿ ಇಡೀ ಕುಟುಂಬ ದಯಾಮರಣ ಕೋರಿ ರಾಷ್ಟ್ರಪತಿ ಮೊರೆ ಹೋಗುವುದಾಗಿ ಅನ್ವರ್ ಸಹೋದರ ಕಬೀರ್ ತಿಳಿಸಿದರು. ಹತ್ಯೆ ನಡೆದು ಮೂರು ವರ್ಷ ಕಳೆದಿದ್ದರೂ ತನಿಖೆ ಪ್ರಗತಿ ಕಂಡಿಲ್ಲ. ಅವರ ಅಗಲಿಕೆಯ ಕೊರಗಿನಲ್ಲೇ ತಂದೆಯೂ ಸಾವಿಗೀಡಾಗಿದ್ದಾರೆ. ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ. ಅನ್ವರ್ ಪತ್ನಿ, ಮಕ್ಕಳು, ಕುಟುಂಬ ಪ್ರತಿದಿನ ನ್ಯಾಯ ಸಿಗಲಿಲ್ಲ ಎನ್ನುವ ಕೊರಗಿನಲ್ಲೇ ಪರಿತಪಿಸುತ್ತಿದ್ದಾರೆ. ಹಾಗಾಗಿ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ:
ಅಂದಿನ ಎಸ್ಪಿ ಅಣ್ಣಾಮಲೈ 40 ದಿನದಲ್ಲಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು. ಅವರ ನಂತರ ಬಂದ ಎಸ್ಪಿ ಹರೀಶ್ ಪಾಂಡೆ ಎರಡೇ ತಿಂಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದರು. ಈ ಪ್ರಕರಣದಲ್ಲಿ ಏಳೆಂಟು ತನಿಖಾಧಿಕಾರಿಗಳು ಬಂದು ಹೋದರೂ ತನಿಖೆ ತಾರ್ಕಿಕ ಅಂತ್ಯ ತಲುಪಲಿಲ್ಲ. ಇನ್ನೇನು ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂಬ ಹಂತದಲ್ಲಿ ಅಧಿಕಾರಿಗಳನ್ನು ವರ್ಗಾಯಿಸಿ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ. ಹಿಂದಿನ ಸರ್ಕಾರವಾಗಲಿ, ಈಗಿನ ಬಿಜೆಪಿ ಸರ್ಕಾರವಾಗಲಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.
ಘಟನೆಯ ಸಾಂದರ್ಭಿಕ ಸಾಕ್ಷ್ಯವಿದೆ:
ಜಿಲ್ಲೆಯ ಶಾಸಕರು, ಸಂಸದರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸಿದ ಮೇರೆಗೆ ಸಿಎಂ ಅವರು ಎಸ್‍ಐಟಿ ತನಿಖೆಗೆ ಆದೇಶಿಸಿದರೂ ಅದು ಸಿಐಡಿ ತನಿಖೆಗೆ ಸೀಮಿತವಾಯಿತು. ಘಟನೆಯ ಸಾಂದರ್ಭಿಕ ಸಾಕ್ಷ್ಯಾಧಾರಗಳಿವೆ. ಪೊಲೀಸರ ಬಳಿ ಬೈಕ್‍ನಲ್ಲಿ ಬಂದ ಆರೋಪಿಗಳ ದೃಶ್ಯಾವಳಿಗಳು ಇವೆ. ಅವರ ಚಹರೆ ಪತ್ತೆ ಹಚ್ಚುವ ಪ್ರಯತ್ನವೂ ಆಗಿದೆ. ಇಷ್ಟಾದರೂ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು. ಇದು ಬಹಳ ದೊಡ್ಡ ಮಟ್ಟದ ಕೇಸ್. ತನಿಖೆ ಪೂರ್ಣಗೊಂಡಿದೆ. ಆರೋಪಿಗಳನ್ನು ಬಂಧಿಸುವುದಷ್ಟೇ ಬಾಕಿ ಎಂದು ಅಣ್ಣಾಮಲೈ ಹೇಳಿದ್ದರು. ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ಕೆಲವರನ್ನು ಬ್ರೈನ್ ಮ್ಯಾಪಿಂಗ್‍ಗೆ ಒಳಪಡಿಸಲು ಹೈದರಾಬಾದ್‍ಗೆ ಕರೆದೊಯ್ಯಲು ಸಿದ್ಧತೆಯಾಗಿದೆ ಎಂದು ಎಸ್ಪಿ ಹರೀಶ್ ಪಾಂಡೆ ಹೇಳಿದ್ದರು. ಹೀಗಿದ್ದ ಮೇಲೆ ಅವರನ್ನು ಬಂಧಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು.
ನಮಗೆ ನ್ಯಾಯವನ್ನಷ್ಟೇ ಕೊಡಿ:
ಪ್ರಕರಣದ ಹಿಂದೆ ಕೆಲಸ ಮಾಡುತ್ತಿರುವ ಕಾಣದ ಕೈ ಯಾವುದು? ಅನ್ವರ್ ಬಿಜೆಪಿಯಲ್ಲಿದ್ದ ಕಾರಣಕ್ಕೆ ಇಡೀ ಮುಸ್ಲಿಂ ಸಮುದಾಯದ ವಿರೋಧ ಕಟ್ಟಿಕೊಳ್ಳುವಂತಾಗಿದೆ. ನಮ್ಮವರೇ ನಮ್ಮನ್ನು ಅಸ್ಪೃಶ್ಯರಂತೆ ನೋಡುತ್ತಿದ್ದಾರೆ ಎಂದು ದೂರಿದರು. ಸಮಾಜದ ಹಿರಿಯರಿಂದ ಬೆಂಬಲ ಸಿಗುತ್ತಿಲ್ಲ. ನಮಗೆ ನ್ಯಾಯ ಕೊಡಿ ಎಂದಷ್ಟೇ ನಾವು ಕೇಳುತ್ತಿದ್ದೇವೆ. ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಸರ್ಕಾರದ ಜತೆ ಪತ್ರ ವ್ಯವಹಾರ ನಡೆಸಲಾಗಿದೆ. ಇಷ್ಟಾಗಿಯೂ ಸೂಕ್ತ ಉತ್ತರ ಸಿಗಲಿಲ್ಲ. ನಮ್ಮ ಕುಟುಂಬ ಹೊರ ಹೋಗಲು ಪ್ರಾಣಭಯವಿದೆ. ಹೀಗೆಲ್ಲ ಒತ್ತಡದಲ್ಲಿರುವ ಬದಲು ಸಾಯುವುದೇ ಲೇಸೆನ್ನುವ ಭಾವನೆ ಬಂದಿದೆ ಎಂದರು. ಅನ್ವರ್ ಸಹೋದರ ಬಷೀರ್, ಮಕ್ಕಳು ಸುದ್ದಿಗೋಷ್ಠಿಯಲ್ಲಿದ್ದರು.