ಅನ್ಯಾಯವಾದಲ್ಲಿ ಪ್ರತಿಭಟಿಸುತ್ತೇವೆ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಜಾತಿ ಗಣತಿ ವರದಿಯಂತೆ ರಾಜ್ಯ ಸರ್ಕಾರ ಕೈಗೊಳ್ಳುವ ನಿರ್ಣಯದಿಂದ ಕುರುಹಿನಶೆಟ್ಟಿ (ನೇಕಾರ) ಸಮಾಜಕ್ಕೆ ಅನ್ಯಾಯವಾದಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಜಗದ್ಗುರು ಶ್ರೀ ವೀರಭಿಕ್ಷಾವರ್ತಿ ನೀಲಕಂಠ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಯಂತೆ ಸರ್ಕಾರದ ಸಮೀಕ್ಷೆಯಲ್ಲಿ ಕುರುಹಿನಶೆಟ್ಟಿ ಜನಾಂಗದ ಜನಸಂಖ್ಯೆ 1.53 ಲಕ್ಷ ಎಂದು ತೋರಿಸಲಾಗಿದೆ. ಬಾಗಲಕೋಟ ಜಿಲ್ಲೆಯೊಂದರಲ್ಲಿಯೇ ನಮ್ಮ ಸಮಾಜದ ಜನಸಂಖ್ಯೆ 3 ಲಕ್ಷಕ್ಕೂ ಹೆಚ್ಚಿದೆ. ರಾಜ್ಯದಲ್ಲಿ 12 ಲಕ್ಷಕ್ಕೂ ಮೀರಿದ್ದೇವೆ ಎಂದು ತಿಳಿಸಿದರು.

ಜಾತಿ ಗಣತಿ ವರದಿ ಸತ್ಯಕ್ಕೆ ದೂರವಾಗಿದೆ. ಹತ್ತು ವರ್ಷಗಳ ಹಿಂದಿನ ವರದಿ ಈಗಿರುವ ಸ್ವರೂಪದಲ್ಲಿ ಸ್ವೀಕೃತವಾದಲ್ಲಿ ನಮ್ಮಂತಹ ಹಿಂದುಳಿದ ಸಮಾಜಕ್ಕೆ ಅನ್ಯಾಯವಾಗಲಿದೆ. ಈಗಾಗಲೇ ನಾವು ರಾಜ್ಯದ ಕೆಲವು ಪ್ರದೇಶಗಳಲ್ಲಿ ಆಂತರಿಕ ಸಮೀಕ್ಷೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಸಮಾಜದ ಜನಸಂಖ್ಯೆ ಬಗ್ಗೆ ನಿಖರ ಲೆಕ್ಕ ಕೊಡುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವೀರಣ್ಣ ಜಡಿ, ಬಸವರಾಜ ಬೈಲಮ್ಮನವರ, ವೀರಣ್ಣ ಸಂಗನಾಳ, ಎಂ.ಪಿ. ಶಿವಕುಮಾರ, ಎಂ.ಬಿ. ರೋಣದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net