ಅನ್ಯಾಯದ ವಿರುದ್ಧ ಧ್ವನಿ ಎತ್ತಿ

14
Published on

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಸಿದ್ದರಾಮಯ್ಯ ಕರೆ

ತುಮಕೂರು: ಇಂದು ಸರ್ಕಾರಗಳಿಂದಲೇ ಭೂದಾಹ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಭೂಸ್ವಾಧಿನ ಪಡಿಸಿಕೊಂಡ ಭೂಮಿಯೇ ಶೇ.60ರಷ್ಟು ಪಾಳು ಬಿದ್ದಿರುವಾಗ ರೈತರಿಗೆ ತೊಂದರೆ ನೀಡಿ ಬಲವಂತದ ಭೂಸ್ವಾಧಿನ ಪ್ರಕ್ರಿಯೆ ಸರಿಯಿಲ್ಲ. ಇಂದು ರಾಜಕೀಯ ಕ್ಷೇತ್ರ ಮಾತ್ರವಲ್ಲ ಸಾಹಿತ್ಯ ಕ್ಷೇತ್ರವೂ ದುರ್ಬಲಗೊಂಡಂತೆ ಭಾಸವಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್​. ಜಿ.ಸಿದ್ದರಾಮಯ್ಯ ಹೇಳಿದರು.

ವೀಚಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ನಗರದ ರವೀಂದ್ರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ 2024ರ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಪ್ರಭುತ್ವದ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಾಹಿತಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದಕ್ಕೆ ಸಾಹಿತ್ಯ ಕ್ಷೇತ್ರ ಕೂಡ ಹೊರತಾಗಿಲ್ಲ ಎಂದು ತಿಳಿಸಿದರು.

ಸಹಕಾರ ಸಚಿವ ಕೆ.ಎನ್​.ರಾಜಣ್ಣ ಮಾತನಾಡಿ, ಊಹೆಯ ಸಾಹಿತ್ಯಕ್ಕೆ ಎಂದಿಗೂ ಜನಮನ್ನಣೆ ಸಿಗುವುದಿಲ್ಲ. ಆದರೆ, ಅನುಭವದ ಸಾಹಿತ್ಯ ಜನಸಾಮಾನ್ಯರ ಮನಸ್ಸಿಗೆ ಹತ್ತಿರ

ವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂದು ಎಲ್ಲರೂ ಮೊಬೈಲ್​ ಲೋಕದಲ್ಲಿ ಮುಳುಗಿದ್ದು, ಪ್ರಯಾಣದ ವೇಳೆ ಪಕ್ಕದಲ್ಲಿ ಕೂತಿರುವವರು ಯಾರು ಎಂದು ಅರಿಯದಿರುವುದಷ್ಟು ಮಾನವ ಸಂಬಂಧಗಳು ಶಿಥಿಲವಾಗುತ್ತಿದೆ. ಯುವ ಪೀಳಿಗೆಯಲ್ಲಿ ಸಾಹಿತ್ಯ, ಸಂಸತಿ, ಕಲಾ ಪ್ರಕಾರಗಳ ಅಭಿರುಚಿ ಕಡಿಮೆಯಾಗುತ್ತಿದೆ ಎಂದು ಬೇಸರಿಸಿದರು.

ಮಾತೃಭಾಷೆಗೆ ಅಪಚಾರವಾದಾಗ ಸಿಡಿದೇಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ವೀಚಿ ಅವರು ಕೃಷಿ, ರಾಜಕೀಯ, ಸಾಹಿತ್ಯ ಮೂರು ಪ್ರಕಾರದಲ್ಲಿ ಹೆಸರು ಮಾಡಿದವರು. ಎಚ್​.ಜಿ.ಸುಡ್ಡಗುಡ್ಡಯ್ಯ, ಕೆ.ಆರ್​.ನಾಯಕರು, ವೀಚಿ, ಲೋಹಿತಾಶ್ವ ಅವರೆಲ್ಲ ಒಟ್ಟಾಗಿ ಸೇರುತ್ತಿದ್ದವರು. ಸಾಹಿತ್ಯ ಪುಸ್ತಕಗಳ ಓದು, ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ರುವುದರಿಂದ ಹೊಸ ಚಿಂತನೆ, ಜ್ಞಾನದ ಅರಿವು

ಬೆಳೆಸಿಕೊಳ್ಳಬಹುದು ಎಂದು ಸ್ಮರಿಸಿದರು.

ವೀಚಿ ಪ್ರಶಸ್ತಿಗೆ ಆಯ್ಕೆಯಾದ ಕಾದಂಬರಿಗಾರ್ತಿ ಪಿ.ಚಂದ್ರಿಕಾ ಅವರ ಮೂವರು ಮಹಮದರು ಕೃತಿ, ಯುವ ಕವಿ ಡಾ.ಗೋವಿಂದರಾಜು ಎಂ.ಕಲ್ಲೂರು ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಕೃತಿ ಮುಂದುವರಿದ ಹೊಸ ಆಲೋಚನೆಗಳಿಗೆ ಸಾಕ್ಷಿಯಾಗಿದೆ ಎಂದರು. ಸಾಹಿತಿ ಡಾ.ಬಸವರಾಜ ಸಾದರ ಮಾತನಾಡಿ, ಪ್ರಶಸ್ತಿಗಳನ್ನು ಕೊಡುವವರು, ಪಡೆದುಕೊಳ್ಳುವವರ ನಡುವೆ ಪ್ರತಿಷ್ಠೆಯಂತಾಗಿರುವ ಈ ಸಂದರ್ಭದಲ್ಲಿ ಸಾಹಿತ್ಯ ಕೃತಿಗಳನ್ನು ನಿಷ್ಪಕ್ಷಪಾತವಾಗಿ ಆಯ್ಕೆ ಮಾಡುವ ವೀಚಿ ಪ್ರತಿಷ್ಠಾನದ ಪುರಸ್ಕಾರಗಳು ಹೆಚ್ಚು ಮೌಲ್ಯಯುತವಾದವು. ಪ್ರಶಸ್ತಿಗೆ ಆಯ್ಕೆಯಾದ ಪಿ.ಚಂದ್ರಿಕಾ ಅವರ ಮೂವರು ಮಹಮದರು, ಡಾಗೋವಿಂದರಾಜ ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಕೃತಿ ಅವಲೋಕಿಸಿದಾಗ ಕಟ್ಟುವ, ಬೆಸೆಯುವ ಸಂಗತಿಗಳನ್ನು ಹೆಚ್ಚು ಕಾಣಬಹುದಾಗಿದೆ ಎಂದು ತಿಳಿಸಿದರು. ಪ್ರಶಸ್ತಿ ಆಯ್ಕೆ ತೀರ್ಪುಗಾರರಾದ ಕತೆಗಾರ ತುಂಬಾಡಿರಾಮಯ್ಯ ಹಾಗೂ ಡಾ.ಬೇಲೂರು ರಘುನಂದನ ಮಾತನಾಡಿ, 2 ಕೃತಿಗಳು ಶ್ರೇಷ್ಠತೆಯ ವ್ಯಸನವನ್ನು ಬದಿಗೆ ಸರಿಸಿ ಅಂತ@ಕರಣವನ್ನು ಸಾರುತ್ತಿವೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಪಿ.ಚಂದ್ರಿಕಾ ಮಾತನಾಡಿ, ಸಾಂಪ್ರದಾಯಿಕ ಬ್ರಾಹ್ಮಣ ಮನೆತನದಿಂದ ಬಂದ ನಾನು ನನ್ನ ಸುತ್ತಲಿನ ಸಂಗತಿಗಳನ್ನು ಅವಲೋಕಿಸಿದಾಗ ಎಲ್ಲಾ ಧರ್ಮಗಳು ಆಳದಲ್ಲಿ ಒಳಿತನ್ನೇ ಬಯಸುತ್ತವೆ ಎಂಬುದು. ಇದು ನನ್ನ ಮೂವರು ಮಹಮದರು ಕೃತಿಯಲ್ಲಿ ಹಾಸುಹೊಕ್ಕಾಗಿದೆ ಎಂದು ಹೇಳಿದರು.

ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿಎಂ.ಬಸವಯ್ಯ, ಪತ್ರಿಕೋದ್ಯಮಿ ಎಸ್​.ನಾಗರಣ್ಣ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್​.ನಾಗರಾಜ್​, ಡಾ.ಹನುಮಂತೇಗೌಡ ಪ್ರತಿಷ್ಠಾನದ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net