

ಮೈಸೂರು: ಅನ್ಯಾಯದ ವಿರುದ್ಧ ಧ್ವನಿ ಎತ್ತುವುದನ್ನು ಕಲಿಸುವುದು ಶಿಕ್ಷಣದ ಗುರಿ. ಹೀಗಾಗಿ ರಾಜಕೀಯದಲ್ಲಿ ಪಾಲ್ಗೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ ಹೇಳಿದರು.
ನಗರದ ನೃಪತುಂಗ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಎಐಡಿಎಸ್‌ಒನ ರಾಜ್ಯ ಮಟ್ಟದ ಅಧ್ಯಯನ ಶಿಬಿರದ ಸಮಾರೋಪ ಅಧಿವೇಶನದಲ್ಲಿ ಮಾತನಾಡಿದರು.
ಶರತ್ ಚಂದ್ರ, ಚಿತ್ತರಂಜನ್ ದಾಸ್, ರವೀಂದ್ರನಾಥ ಟ್ಯಾಗೋರ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಹೀಗೆ ಮುಂತಾದ ಮಹಾನ್ ವ್ಯಕ್ತಿಗಳು ಹೇಳಿದಂತೆ ಕೇವಲ ಓದುವುದಾಗಲಿ, ಪದಕಗಳನ್ನು ಪಡೆದುಕೊಳ್ಳುವುದಾಗಲಿ ವಿದ್ಯಾರ್ಥಿ ಜೀವನದ ಪರಮೋಚ್ಛ ಗುರಿಯಲ್ಲ. ಚಾರಿತ್ರ್ಯ ಗಳಿಸಿಕೊಳ್ಳುವುದು ಶಿಕ್ಷಣದ ಗುರಿ ಎಂದರು.
ಜೀವನದ ಎಲ್ಲ ಅಂಶಗಳನ್ನು ನಿರ್ದೇಶಿಸುವುದೇ ರಾಜಕೀಯ. ಯಾರು ಸಹ ರಾಜಕೀಯದಿಂದ ತಟಸ್ಥವಾಗಿರಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಎರಡು ರೀತಿಯ ಬಣಗಳಿವೆ. ಒಂದು ನ್ಯಾಯದ ಪರ ಇರುವ ರಾಜಕೀಯ. ಇನ್ನೊಂದು ಅನ್ಯಾಯದ ಪರವಾದ ರಾಜಕೀಯ ಎಂದರು.
ನಮ್ಮ ಸುತ್ತಮುತ್ತಲಿನ ಶಿಕ್ಷಕರು, ಪೋಷಕರು, ಸಂಬಂಧಿಗಳು ಎಲ್ಲರೂ ಸೇರಿ ವಿದ್ಯಾರ್ಥಿಗಳ ಪರಮೋಚ್ಚ ಜವಾಬ್ದಾರಿ ಎಂದರೆ ಓದು ಎನ್ನುತ್ತಾರೆ. ಇವರು ತಲೆ ಎತ್ತಿ ವಿದ್ಯಾರ್ಥಿಗಳು ಹೋರಾಟಗಳನ್ನು ಕಟ್ಟುವುದರಿಂದ ತಪ್ಪಿಸಲು ಹೀಗೆ ಹೇಳುತ್ತಿರುತ್ತಾರೆ.
ಆದರೆ ಇಂದಿನ ಸಮಾಜದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಎಷ್ಟೋ ಜನ ಇರುವ ಉದ್ಯೋಗವನ್ನು ಸಹ ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 20 ಕೋಟಿ ಜನ ಹಸಿವಿನಿಂದ ನರಳುತ್ತಿದ್ದಾರೆ. 4500 ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿದ್ದಾರೆ. 7000 ಜನರು ಪ್ರತಿದಿನ ಹಸಿವಿನಿಂದ ಸಾಯುತ್ತಿದ್ದಾರೆ.
ಜತೆಗೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಕೂಡ ಬಡವರ ವಿರೋಧಿಯಾಗಿದೆ ಎನ್ನುವುದಕ್ಕೆ ಉದಾಹರಣೆ ಬಿಲ್ಕಿಸ್ ಬಾನು, ಬನ್ವಾರಿ, ಆರ್‌ಜಿ ಕರ್ ಪ್ರಕರಣಗಳಲ್ಲಿಯೇ ಸಾಬೀತಾಗುತ್ತದೆ ಎಂದು ತಿಳಿಸಿದರು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ರಾಜಿರಹಿತ ಪಂಥವನ್ನು ಪ್ರತಿನಿಧಿಸಿದ ಮಹಾನ್ ಸಾಹಿತಿ ಶರತ್ ಚಂದ್ರರ ವೈಕುಂಠನ ಮೃತ್ಯುಪತ್ರ ಎಂಬ ಕಥೆಯ ಮೌಲ್ಯ ಕುರಿತು ಮಾತನಾಡಿದರು.
ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಅಭಯಾ ದಿವಾಕರ್ ಮಾತನಾಡಿ, ಜ್ಞಾನದ ಮೂಲಕ ಮುಂದೆ ಬರುವ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಸಜ್ಜಾಗಬೇಕೆಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಉಪಾಧ್ಯಕ್ಷರಾದ ಹಣಮಂತು, ಅಭಯ ದಿವಾಕರ್, ಚಂದ್ರಕಲಾ, ಅಪೂರ್ವ, ರಾಜ್ಯ ಖಜಾಂಚಿ ಸುಭಾಷ್, ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.