

ಕಂಪ್ಲಿ: ಸಾಮಾಜಿಕವಾಗಿ ಅಸ್ಪಶ್ಯರಂತೆ ಇರುವ ಸವಿತಾ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಎ.ಹನುಮಂತ ಒತ್ತಾಯಿಸಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಮಂಗಳವಾರ ಮಾತನಾಡಿದರು. ಕ್ಷೌರಿಕ ವೃತ್ತಿ ಸವಿತಾ ಸಮುದಾಯದವರ ಕುಲಕಸುಬು ಆಗಿದೆ. ಸವಿತಾ ಸಮುದಾಯದವರನ್ನು ಹೊರತುಪಡಿಸಿ ಅನ್ಯರಿಗೆ ಕ್ಷೌರಿಕ ವೃತ್ತಿಗೆ ಪುರಸಭೆಯಿಂದ ಪರವಾನಗಿ ನೀಡಬಾರದು. ಸವಿತಾ ಸಮುದಾಯ ಭವನ ನಿರ್ಮಿಸಿ ಕೊಡಬೇಕು ಎಂದು ಕೋರಿದರು.
ತಹಸೀಲ್ದಾರ್ ಶಿವರಾಜ ಮಾತನಾಡಿ, ಸವಿತಾ ಮಹರ್ಷಿ ತತ್ವ-ಆದರ್ಶಗಳನ್ನು ಪಾಲಿಸಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸ್ವಉದ್ಯೋಗಕ್ಕಾಗಿ ತರಬೇತಿ ಪಡೆಯಲು ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು. ಸವಿತಾ ಸಂಘದ ಜಿಲ್ಲಾ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಜಾನಕಿರಾಮ್, ಪ್ರಮುಖರಾದ ಪಿ.ಪಾಂಡುರಂಗ, ಎ.ಆಂಜನೇಯ, ಎನ್.ಶ್ರೀನಿವಾಸುಲು, ಕೆ.ಶ್ರೀನಿವಾಸ್, ಎಚ್.ನಾಗಮ್ಮ, ಎಚ್.ಈರಣ್ಣ, ಬಿ.ಸಿದ್ದಪ್ಪ, ಕೆ.ಮನೋಹರ, ಬಿ.ರಮೇಶ, ಬಿ.ನಾಗೇಂದ್ರ, ವಿ.ವೆಂಕಟರಮಣ, ಭಾಸ್ಕರರೆಡ್ಡಿ, ಬಡಿಗೇರ ಜಿಲಾನ್‌ಸಾಬ್, ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ, ಬಿ.ರವೀಂದ್ರಕುಮಾರ್ ಇತರರಿದ್ದರು.