

ಚಿಂತಾಮಣಿ: ಟೊಮ್ಯಾಟೊ ಖರೀದಿಗೆ ಮಹಾರಾಷ್ಟ್ರದ ವ್ಯಾಪಾರಸ್ಥರೊಬ್ಬರ ಪರವಾಗಿ ಇಲ್ಲಿನ ಎಪಿಎಂಸಿಗೆ ಬಂದಿರುವ ಏಜೆಂಟ್‌ಗೆ ಕರೊನಾ ಸೋಂಕಿರುವ ಸುದ್ದಿ ತಿಳಿದ ವ್ಯಾಪಾರಸ್ಥರು ಭಾನುವಾರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದೆ ದೂರ ಉಳಿದರು.
ವ್ಯಾಪಾರಸ್ಥರು ಹರಾಜಿನಹಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದರಿಂದ ಮಾರುಕಟ್ಟೆ ಕಮೀಷನ್ ಏಜೆಂಟರು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದರಿಂದ ರೈತರು ಮತ್ತು ಕೂಲಿಕಾರ್ಮಿಕರು ಪರದಾಡುವಂತಾಯಿತು.
ಅಂತಾರಾಜ್ಯದ ವ್ಯಾಪಾರಿಗಳಿಗೆ ಕರೊನಾ ತಪಾಸಣೆ ಮಾಡುತ್ತಿಲ್ಲ ಎಂದು ಆರೋಪಿಸಿದ ವ್ಯಾಪಾರಸ್ಥರು ಹಾಗೂ ಕೂಲಿಯಾಳುಗಳು, ಇಲ್ಲಿನ ಮಾರುಕಟ್ಟೆಗೆ ಬೇರ ರಾಜ್ಯದವರ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ಒತ್ತಾಯಿಸಿ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಟೊಮ್ಯಾಟೋವನ್ನು ನಾವೇ ಖರೀದಿಸಿ ಅನ್ಯರಾಜ್ಯಗಳಿಗೆ ಕಳುಹಿಸುತ್ತೇವೆ, ಸದ್ಯದ ಪರಿಸ್ಥಿತಿಯಲ್ಲಿ ಬೇರೆ ರಾಜ್ಯದವರು ಇಲ್ಲಿಗೆ ಬರುವುದು ಬೇಡ, ಈ ನಿಟ್ಟಿನಲ್ಲಿ ಕ್ರಮವಹಿಸುವಂತೆ ವ್ಯಾಪಾರಸ್ಥರಾದ ಶಬ್ಬೀರ್ ಅಹಮ್ಮದ್, ಎಂ.ಜಿಯಾ ಮತ್ತಿತರರ ಆಗ್ರಹಿಸಿದರು.
ಬೇರೆ ರಾಜ್ಯದ ವ್ಯಾಪಾರಸ್ಥರು ಲೋಡಿಂಗ್ ಮತ್ತು ಮತ್ತಿತರ ಕೆಲಸಗಳಿಗೆ ಕೂಲಿಯಾಳುಗಳನ್ನು ಅಲ್ಲಿಂದಲೇ ಕರೆತರುವುದರಿಂದ ಸ್ಥಳೀಯ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ, ಇದಕ್ಕೆ ಕಡಿವಾಣ ಹಾಕುವಂತೆ ಕೂಲಿಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ರಂಗಪ್ಪ ಮನವಿ ಮಾಡಿದರು.
ಸ್ಥಳಕ್ಕೆ ಬಂದ ಎಪಿಎಂಸಿ ಅಧ್ಯಕ್ಷ ಗಂಡ್ರಗಾನಹಳ್ಳಿ ಶ್ರೀರಾಮರೆಡ್ಡಿ ವ್ಯಾಪಾರಸ್ಥರ ಮತ್ತು ಕೂಲಿಯಾಳುಗಳ ಸಮಸ್ಯೆ ಆಲಿಸಿದರು, ತಹಸೀಲ್ದಾರ್, ಪೊಲೀಸ್ ಇಲಾಖೆ, ಎಪಿಎಂಸಿ ಅಧಿಕಾರಿಗಳು ಮತ್ತು ನಿರ್ದೇಶಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.