

ಬೇಲೂರು: ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಫಲಾನುಭವಿಗಳು ಸರಿಯಾಗಿ ಬಳಸಿಕೊಂಡು ಉತ್ತಮ ಜೀವನ ನಡೆಸಲು ಮುಂದಾಗಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಕೃಷಿ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಂತರ ರೂ.ಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ನೀಡುತ್ತಿವೆ. ಆದರೆ ಕೆಲ ಸವಲತ್ತುಗಳು ಅರ್ಹರಿಗೆ ಸಿಗದೆ ಅನ್ಯರ ಪಾಲಾಗುತ್ತಿದೆ ಎಂದು ತಿಳಿಸಿದರು.
ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಯಾರಿಗೂ ಅನ್ಯಾಯವಾಗುವುದಿಲ್ಲ ಜತೆಗೆ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗಳಲ್ಲೇ ಫಲಾನುಭವಿಯನ್ನು ನೇರವಾಗಿ ಆಯ್ಕೆ ಮಾಡಿದ್ದರಿಂದಲೇ ಅರ್ಹ ಫಲಾನುಭವಿಗಳಿಗೆ ಟಾರ್ಪಾಲ್, ಬಿತ್ತನೆ ರಾಗಿ, ಲಘು ಪೋಷಾಕಾಂಶ ಸೇರಿದಂತೆ ಇತರ ಸೌಲಭ್ಯ ನೀಡಲು ಸಾಧ್ಯವಾಗಿದೆ. ಇದೇ ರೀತಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಸವಲತ್ತುಗಳನ್ನು ವಿತರಿಸಲು ಕೃಷಿ ಅಧಿಕಾರಿಗಳಿಗೆ ತಿಳಿಸಿಲಾಗಿದೆ. ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ತರಬೇಕೆಂಬ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ, ಕೃಷಿ ಹೊಂಡ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಹೆಚ್ಚಿನ ಸಹಾಯಧನ ನೀಡಲು ಮನವಿ ಮಾಡಿದ್ದೇನೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್ ಮಾತನಾಡಿ, ಇಲಾಖೆಯಲ್ಲಿ ಸಿಗುವ ವಿವಿಧ ಸವಲತ್ತುಗಳಿಗೆ 886 ಅರ್ಜಿ ಬಂದಿವೆ. ಇದರಲ್ಲಿ ಜ್ಯೇಷ್ಠತೆ ಮತ್ತು ಅರ್ಹತೆ ಆಧಾರದ ಮೇಲೆ 356 ಫಲಾನುಭವಿಗಳಿಗೆ ಟಾರ್ಪಾಲ್, ಬಿತ್ತನೆ ರಾಗಿ, ಲಘು ಪೋಷಾಕಾಂಶಗಳನ್ನು ವಿತರಿಸಲಾಗಿದೆ. ಮುಂದಿನ ದಿನದಲ್ಲಿ ಶಾಸಕರ ಮಾರ್ಗದರ್ಶನದಂತೆ ಸವಲತ್ತು ವಿತರಿಸಲಾಗುವುದು ಎಂದರು.
ತಹಸೀಲ್ದಾರ್ ಎಂ.ಮಮತಾ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಕಾವ್ಯಾ, ಕೃಷಿ ಅಧಿಕಾರಿ ರಕ್ಷಿತಾ, ಪ್ರಕಾಶ್, ರೈತರಾದ ವಿಜೇಂದ್ರ, ವಿರೂಪಾಕ್ಷ, ದೊಡ್ಡಮ್ಮ, ನಾಗರಾಜು ಇತರರು ಇದ್ದರು.