

ಆನೇಕಲ್: ನಮ್ಮ ಪಕ್ಷದಲ್ಲಿ ಬೆಳೆದು, ಅನ್ನ ತಿಂದ ಮನೆಗೆ ಕನ್ನ ಹಾಕಿ ಬೇರೆ ಮನೆಯಲ್ಲಿ ಇರೋರನ್ನು ನಂಬಲು ಹೇಗೆ ಸಾಧ್ಯ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ಪ್ರಶ್ನಿಸಿದರು.
ತಾಲೂಕಿನ ಅತ್ತಿಬೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಜೆಡಿಎಸ್‌ನಲ್ಲಿದ್ದು ಹಲವು ಹುದ್ದೆ ಅಲಂಕರಿಸಿ, ಅಧಿಕಾರ ಅನುಭವಿಸಿದ ಬಳಿಕ ಬೇರೆ ಪಕ್ಷಗಳಿಗೆ ಹೋಗುವ ಮನೋಭಾವ ಇದ್ದವರನ್ನು ಬದಲಾವಣೆ ಮಾಡಲಾದರೂ ಹೇಗೆ ಸಾಧ್ಯ ಎಂಬ ಪ್ರಶ್ನೆ ನಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ದುರಾಡಳಿತಕ್ಕೆ ಇತಿಶ್ರೀ ಹಾಡಲು ನಮ್ಮ ಪಕ್ಷದ ನಿಯೋಜಿತ ಅಭ್ಯರ್ಥಿ ಕೆ.ಪಿ. ರಾಜು ಅವರನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಜೆಡಿಎಸ್ ನಿಯೋಜಿತ ಅಭ್ಯರ್ಥಿ ಕೆ.ಪಿ. ರಾಜು ಮಾತನಾಡಿ, ಪ್ರತಿ ಊರಿನಲ್ಲಿ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಮೇ 1ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತಾಲೂಕಿಗೆ ನಮ್ಮ ಶಕ್ತಿ ಏನೆಂಬುದನ್ನು ತಿಳಿಸಿಕೊಡಬೇಕಿದೆ ಎಂದರು.
ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಜೆಡಿಎಸ್ ಸದಸ್ಯರು ಇದ್ದಾರೆ. ಅವರನ್ನು ಗುರುತಿಸಿ ಸಮಾವೇಶಕ್ಕೆ ಆಹ್ವಾನಿಸುವ ಜತೆಗೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕಿದೆ ಎಂದು ಹೇಳಿದರು.
ಮುಖಂಡ ಟಾಟ್ ರವಿ ಮಾತನಾಡಿ, ತಾಲೂಕಿನಲ್ಲಿ ರೈತರ ಭೂಮಿ ಕಳೆದುಕೊಂಡಿದ್ದಾರೆ. ಆದರೆ ಇಲ್ಲಿನ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗ ಕೊಡಲು ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆ.ಪಿ. ರಾಜು ಅವರನ್ನು ಗೆಲ್ಲಿಸಿದರೆ, ಕೈಗಾರಿಕೆಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ದೇವೇಗೌಡ, ಯುವ ಘಟಕದ ಅಧ್ಯಕ್ಷ ವಿನಯ್ ರೆಡ್ಡಿ, ಮುಖಂಡರಾದ ಅತ್ತಿಬೆಲೆ ಸೂರಿ, ಬಾಬು, ಸುರೇಶ್, ಬಶೀರ್, ಫಾರೂಕ್ ಖಾನ್, ರಾಜಣ್ಣ, ಮಂಜಣ್ಣ, ಮಂಜುನಾಥ್, ಮುಕುಂದ ಮತ್ತಿತರರು ಇದ್ದರು.
ನೂತನ ಪದಾಧಿಕಾರಿಗಳ ಆಯ್ಕೆ: ಆನೇಕಲ್ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಬಿ.ಕೆ. ಬಶೀರ್, ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಫಾರೂಕ್ ಖಾನ್, ಸರ್ಜಾಪುರ ಹೋಬಳಿ ಅಧ್ಯಕ್ಷರಾಗಿ ಹಮ್ಜದ್, ಅತ್ತಿಬೆಲೆ ಹೋಬಳಿ ಸಂಘಟನಾ ಕಾರ್ಯದರ್ಶಿಯಾಗಿ ಚಾನ್, ಅತ್ತಿಬೆಲೆ ಹೋಬಳಿ ಸಹಕಾರ್ಯದರ್ಶಿಯಾಗಿ ತೌಸ್ಿ, ಸಂಘಟನಾ ಕಾರ್ಯದರ್ಶಿಯಾಗಿ ಶಾಹಿದ್, ಆನೇಕಲ್ ತಾಲೂಕು ಪರಿಶಿಷ್ಟ ಘಟಕದ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆಯಾದರು.