ಅನ್ಯಧರ್ಮ ಪಾಲನೆ ಕಾನೂನಾತ್ಮಕವಾಗಿರಲಿ

27Kush03
Published on

ಕುಶಾಲನಗರ: ನಮ್ಮ ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರೂ ಅನ್ಯಧರ್ಮವನ್ನು ಅನುಸರಿಸುವ ಅವಕಾಶವಿದೆ. ಆದರೆ, ಅದು ಕಾನೂನಾತ್ಮಕವಾಗಿರಬೇಕು ಎಂದು ಡಿವೈಎಸ್ಪಿ ಗಂಗಾಧರಪ್ಪ ತಿಳಿಸಿದರು.
ಕುಶಾಲನಗರ ಸಮೀಪದ ಮದಲಾಪುರದ ಬ್ಯಾಡಗೊಟ್ಟ ಗಿರಿಜನ ಪುನರ್ವಸತಿ ಕಾಲನಿಯಲ್ಲಿ ಸೋಮವಾರ ಆಯೋಜಿಸಿದ್ದ ದಲಿತ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.


ಇತ್ತೀಚೆಗೆ ದೇಶದಲ್ಲಿ ಮತಾಂತರವೆಂಬ ಭೂತ ಕಾಡುತ್ತಿದೆ. ದಲಿತರು ಅವಿಧ್ಯಾವಂತರು ಹಾಗೂ ಆರ್ಥಿಕ ದುರ್ಬಲರು ಎಂಬ ದುರ್ಬಲತೆಯನ್ನು ಮುಂದಿಟ್ಟುಕೊಂಡು ಅವರನ್ನು ಸುಲಭವಾಗಿ ಮತಾಂತರಗೊಳಿಸಬಹುದು ಎಂದು ತಿಳಿದು ಇತ್ತೀಚೆಗೆ ಕಾನೂನು ಬಾಹಿರವಾಗಿ ದಲಿತರನ್ನು ಸಾಮೂಹಿಕವಾಗಿ ಮತಾಂತರಗೊಳಿಸುತ್ತಿದ್ದಾರೆ. ಇಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದು ಮತಾಂತರಗೊಳಿಸುವ ವ್ಯಕ್ತಿಗಳಿಗೆ ಶಿಕ್ಷೆಯಾಗಿದೆ. ಪ್ರತಿಯೊಬ್ಬರೂ ಅನ್ಯಧರ್ಮವನ್ನು ಅನುಸರಿಸುವುದು ಸಂವಿಧಾನದ ಅಡಿಯಲ್ಲಿ ತಪ್ಪಲ್ಲ. ಆದರೆ, ದಲಿತರು ತಾವಿರುವ ಜಾತಿಯ ಆಧಾರದಲ್ಲಿ ಸರ್ಕಾರದಿಂದ ಲಾಭ ಪಡೆದು ಅನ್ಯಧರ್ಮೀಯ ಪ್ರೀತಿ ತೋರಿ ಕಾನೂನು ಬಾಹಿರವಾಗಿ ಮತಾಂತರಗೊಳ್ಳಬಾರದು. ಒಂದೊಮ್ಮೆ ಹಾಗೆನಾದರೂ ಅನ್ಯಧರ್ಮಕ್ಕೆ ಮತಾಂತರಗೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದ ದಲಿತರು ಸರ್ಕಾರಕ್ಕೆ ತಮ್ಮ ಜಾತಿ ದೃಢೀಕರಣ ಪತ್ರ ಹಾಗೂ ಇತರೆ ದಾಖಲೆಗಳನ್ನು ಹಿಂದಿರುಗಿಸಿ ನಂತರ ಕಾನೂನಾತ್ಮಕವಾಗಿ ಯಾವುದೇ ಧರ್ಮವನ್ನು ಬೇಕಾದರೂ ಸ್ವೀಕರಿಸಬಹುದು ಎಂದು ತಿಳಿಸಿದರು.


ತಾವು ಮೂಲ ಧರ್ಮದ ಮಹತ್ವವನ್ನು ಪರಿಪೂರ್ಣವಾಗಿ ಅರಿಯುವಲ್ಲಿ ವಿದ್ಯಾಭ್ಯಾಸದ ವಿಫಲತೆಯೇ ಕಾರಣವಾಗಿದೆ ಎನ್ನುವ ಅಂಶ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ವಿದ್ಯಾವಂತರಾಗುವುದರ ಜತೆಗೆ ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡುವತ್ತ ಗಮನಹರಿಸಬೇಕು ಎಂದು ತಿಳಿಸಿದರು.


ದಲಿತ ಮುಖಂಡ ನಿರ್ವಾಣಪ್ಪ ಮಾತನಾಡಿ, ವಿರಾಜಪೇಟೆ ತಾಲೂಕಿನ ದಿಡಳ್ಳಿಯಿಂದ ಸುಮಾರು 250ಕ್ಕೂ ಅಧಿಕ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಬ್ಯಾಡಗೂಟ್ಟಕ್ಕೆ ಕರೆತರಲಾಗಿದೆ. ಸರ್ಕಾರದ ವತಿಯಿಂದ ನಿರ್ಮಿಸಲ್ಪಟ್ಟಂತಹ ಮನೆಗಳು ಕೂಡ ಇನ್ನೂ ಪರಿಪೂರ್ಣವಾಗಿ ವಾಸಕ್ಕೆ ಯೋಗ್ಯವಾಗಿಲ್ಲ. ಈ ಗಿರಿಜನ ಕಾಲನಿಗೆ ಸೂಕ್ತವಾದ ರಸ್ತೆ ಅಭಿವೃದ್ಧಿ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ ಮತ್ತು ಇಲ್ಲಿನ ಮಕ್ಕಳಿಗೆ ಉನ್ನತಮಟ್ಟದ ಶಿಕ್ಷಣದ ಕೊರತೆ ಇರುವ ಕಾರಣದಿಂದಾಗಿ ಮತ್ತು ಶಾಲೆಗಳಿಗೆ ಬಹುದೂರ ನಡೆದು ಸಾಗುವ ಪರಿಸ್ಥಿತಿ ಇರುವುದರಿಂದಾಗಿ ಗಿರಿಜನ ಕಾಲನಿಗೆ ಹೊಂದಿಕೊಂಡಂತೆ ಒಂದು ಪ್ರಾಥಮಿಕ ಶಾಲೆ ನಿರ್ಮಾಣವಾಗಬೇಕು. ಅಲ್ಲದೆ, ಗಿರಿಜನರು ಶ್ರಮಿಕ ಜೀವಿಗಳಾಗಿದ್ದು ಇದೀಗ ನೂತನವಾಗಿ ಕಾಲನಿಗೆ ಹೊಂದಿಕೊಂಡಂತೆ ಮದ್ಯದ ಅಂಗಡಿ ತೆರೆಯಲ್ಪಟ್ಟಿದ್ದು, ಗಿರಿಜನರು ತಮ್ಮ ದಿನದ ಕೂಲಿಯನ್ನು ಮದ್ಯದ ಅಂಗಡಿಗೆ ಸುರಿದು ತಮ್ಮ ಜೀವನವನ್ನು ನರಕ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಗಿರಿಜನ ಕಾಲನಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಇಲ್ಲಿನ ದಲಿತ ನಿವಾಸಿಗಳ ಸಮಸ್ಯೆ ನಿವಾರಣೆಗೆ ಮುಂದಾಗಲಾಗುವುದೆಂದು ತಿಳಿಸಿದರು.


ವೃತ್ತನಿರೀಕ್ಷಕ ಮಹೇಶ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಪುನೀತ್ ಕುಮಾರ್ ತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net