

ಮೈಸೂರು: ಅನ್ಯಗ್ರಹ ಜೀವಿಗಳು ಇವೆಯೇ..? ತಲೆ ಕೂದಲು ಬಿಳಿ ಆಗಲು ಕಾರಣ ಏನು...?
ಮೈಸೂರು ವಿಶ್ವವಿದ್ಯಾಲಯದ ‘ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರ’ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿದ ಪ್ರಶ್ನೆಗಳು ಇವು.
ಜಯಲಕ್ಷ್ಮೀಪುರಂನ ಮಹಾಜನ ಪ್ರೌಢಶಾಲೆ, ಗಾಂಧಿನಗರದ ಪ್ರಗತಿ ಪ್ರೌಢಶಾಲೆ, ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆ, ಮೈವಿವಿ ಪ್ರೌಢಶಾಲೆ ಮಕ್ಕಳು ಹೀಗೆ ವಿವಿಧ ಪ್ರಶ್ನೆಗಳನ್ನು ಮುಂದಿಟ್ಟರು. ಅದಕ್ಕೆ ವಿಜ್ಞಾನಿಗಳು, ಪ್ರಾಧ್ಯಾಪಕರು ಸೂಕ್ತ ಉತ್ತರ ನೀಡಿ ಮಕ್ಕಳ ಕುತೂಹಲ ತಣಿಸಿದರು.
ನಿವೃತ್ತ ಭೌತಶಾಸ್ತ್ರ ವಿಜ್ಞಾನ ಪ್ರಾಧ್ಯಾಪಕ ಪ್ರೊ.ಎನ್.ಎಸ್.ಪ್ರಸಾದ್ ಮಾತನಾಡಿ, ಭೂಮಿ ಮೇಲೆ ಅನ್ಯಗ್ರಹ ಜೀವಿಗಳಿವೆ ಎಂಬುದು ಸುಳ್ಳು. ಯಾವ ಅನ್ಯಗ್ರಹ ಜೀವಿಯೂ ಭೂಮಿಯಲ್ಲಿ ವಾಸ ಇಲ್ಲ. ಇದೊಂದು ಕಟ್ಟು ಕಥೆ. ಮನುಷ್ಯನೇ ಭೂಮಿಗೆ ಅನ್ಯಗ್ರಹ ಜೀವಿ ಇರಬಹುದು ಎಂಬ ನಿಟ್ಟಿನಲ್ಲಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.
ವನ್ಯಜೀವಿಗಳು, ಸಾಕು ಪ್ರಾಣಿಗಳು, ಕಾಡು ಪ್ರಾಣಿಗಳು ಹೀಗೆ ಅನೇಕ ಬಗೆಯ ಪ್ರಾಣಿಗಳು ಒಂದೇ ರೀತಿ ಇವೆ. ಆದರೆ, ಮನುಷ್ಯ ಇವರಿಗಿಂತ ಭಿನ್ನವಾಗಿರುವ ಕಾರಣ ಸಂಶೋಧನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಬಿಗ್‌ಬ್ಯಾಂಗ್(ಮಹಾಸ್ಫೋಟ) ಸಿದ್ಧಾಂತದ ಕುರಿತು ಮಾತನಾಡಿದ ಭೌತ ವಿಜ್ಞಾನ ಪ್ರಾಧ್ಯಾಪಕ ಪ್ರೊ.ಎಂ.ಎಸ್.ಚಂದ್ರಶೇಖರ್, ಇದು ವಿಶ್ವದ ಉಗಮ ತಿಳಿಸುತ್ತದೆ. ಸೂರ್ಯ ಹೇಗೆ ಉದಯಿಸಿದ ಬಳಿಕ ಭೂಮಿ ಹೇಗೆ ನಿರ್ಮಾಣವಾಯಿತು ಎಂಬುದು ಈ ಸಂಶೋಧನೆಯಿಂದ ತಿಳಿದುಬರಲಿದೆ ಎಂದರು.
ಗುರುತ್ವಾಕರ್ಷಣೆ ನಿಯಮದ ಕುರಿತು ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಅವರು, ಭೂಮಿ ಗುಂಡಗಿದ್ದರೆ ಮನುಷ್ಯ ಏಕೆ ಬೀಳುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದರು.
ಮಗುವಿನ ಗರ್ಭದ ಅವಧಿ ಕುರಿತು ಪ್ರಶ್ನೆಗೆ ಉತ್ತರಿಸಿದ ನಿವೃತ್ತ ಪ್ರಾಣಿ ವಿಜ್ಞಾನ ಪ್ರಾಧ್ಯಾಪಕ ಪ್ರೊ.ಎಸ್.ಎನ್.ಹೆಗ್ಡೆ, ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಭಾಗ್ಯಲಕ್ಷ್ಮೀ ಅವರು, ಪ್ರತಿ ಪ್ರಾಣಿಗೂ ಭಿನ್ನವಾದ ಗರ್ಭಧಾರಣೆ ಅವಧಿ ಇರುತ್ತದೆ.
ಆಯಾ ಜೀವಿ ಹೊರ ಜಗತ್ತಿಗೆ ಬರಲು ಸಮರ್ಥವಾಗಲು ಕೆಲ ಪ್ರಮುಖ ಅಂಗಾಗಗಳ ಬೆಳವಣಿಗೆ ಅಗತ್ಯ ಎಂದರು. ಇಸ್ರೋ ನಿವೃತ್ತ ವಿಜ್ಞಾನಿ ಪ್ರೊ.ವಿ.ಜಗನ್ನಾಥ್, ನಿವೃತ್ತ ಜೀವರಸಾಯನ ಪ್ರಾಧ್ಯಾಪಕ ಬಿ.ಮಧುಸೂದನ್ ಇನ್ನಿತರರಿದ್ದರು.