

ತರೀಕೆರೆ: ಕನ್ನಡದ ಪ್ರತಿ ಶಬ್ದವನ್ನೂ ಉಳಿಸಿಕೊಂಡರೆ ಬಹುತ್ವ ಕಾಪಾಡಿಕೊಂಡಂತಾಗುತ್ತದೆ ಎಂದು ಸಂಸ್ಕೃತಿ ಚಿಂತಕ ಡಾ. ರಹಮತ್ ತರೀಕೆರೆ ಹೇಳಿದರು.
ರಂಗೇನಹಳ್ಳಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸದ್ಗುರು ಜನಸೇವಾ ಫೌಂಡೇಶನ್, ಅರಿವು ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಕಾರ್ಯಾಗಾರದಲ್ಲಿ ನಡೆದಾಡುವ ಕನ್ನಡ ವಿಷಯ ಕುರಿತು ಮಾತನಾಡಿದರು. ಭಾಷೆ ನಮ್ಮದಲ್ಲ ಎನ್ನುವ ಕಾರಣಕ್ಕೆ ಅನ್ಯ ಭಾಷೆಯನ್ನು ಗೇಲಿ ಮಾಡುವುದು ಅಸಹನೆ ತೋರಿಸುತ್ತದೆ ಎಂದರು.
ಕನ್ನಡದ ಒಳನುಡಿಗಳನ್ನು ಉಳಿಸಿ ಸಂಭ್ರಮಿಸಬೇಕಿದೆ. ಕನ್ನಡ ಏಕ ವಚನವಾಗಿದ್ದು, ಕನ್ನಡಗಳು ನಾವು ಬಳಸುವ ಪದಗಳಾಗಬೇಕು. ಮಾಧ್ಯಮಗಳು ಮತ್ತು ಆಕಾಶವಾಣಿ ಕನ್ನಡಕ್ಕೆ ಅನ್ಯಾಯ ಮಾಡಿವೆ. ಮೇಲು ಎಂಬುದು ಆಡಳಿತಕ್ಕೆ ಇರಬೇಕೇ ಹೊರತು ಸಾಹಿತ್ಯಕ್ಕಲ್ಲ. ದೇವನೂರು ಮಹಾದೇವ ಕುಸುಮಬಾಲೆ ಮೂಲಕ ನಂಜನಗೂಡಿನ ನೆಲದ ಭಾಷೆಯನ್ನು ಪರಿಚಯಿಸಿದರು. ನಾಡಿನಲ್ಲಿ ಪ್ರತಿ ಹತ್ತು ಕಿಮೀಗೆ ಭಾಷೆ ಶೈಲಿ ಬದಲಾಗುತ್ತದೆ. ಈ ಭಿನ್ನವನ್ನು ನಾವು ಗೌರವಿಸಬೇಕು. ಕನ್ನಡ ನಿಘಂಟುಗಳು ಒಳಗನ್ನಡವನ್ನು ಸೇರಿಕೊಳ್ಳಲಿಲ್ಲ ಎಂದು ಹೇಳಿದರು.
ಹಿಂದಿ ಕಲಿಕೆಗೆ ವಿರೋಧ ಬೇಡ. ಆದರೆ ಹಿಂದಿ ಕಡ್ಡಾಯಕ್ಕೆ ನಮ್ಮ ವಿರೋಧವಿರಲಿ. ಕಳೆದ ಸಾಲಿನಲ್ಲಿ 95 ಸಾವಿರ ವಿದ್ಯಾರ್ಥಿಗಳು ಹಿಂದಿ ಭಾಷಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಭಾಷಾ ನೀತಿಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿಪೆಟ್ಟು ನೀಡಬಾರದು ಎಂದರು.
ರಂಗಕರ್ಮಿ ಡಾ. ಪ್ರೊ. ರಾಜಪ್ಪ ದಳವಾಯಿ ಮಾತನಾಡಿ, ಅಂದು ಗೋಡೆಗಳ ಮೇಲೆ ಬರೆದ ಹೋರಾಟದ ಸಾಲುಗಳು ಬಳಿಕ ಸರ್ಕಾರದ ಕಾನೂನುಗಳಾಗಿ ಮಾರ್ಪಟ್ಟಿವೆ. ಹೋರಾಟ ಸಮಸ್ಯೆಗಳ ನಡುವೆ ಹುಟ್ಟಿಕೊಳ್ಳುತ್ತಿದೆ. 33 ವರ್ಷಗಳ ಮೀಸಲಾತಿ ಹೋರಾಟ ಈಗ ವೈಜ್ಞಾನಿಕವಾಗಿ ವಿಂಗಡಿಸಿ ಮೀಸಲಾತಿ ನಿಗದಿಪಡಿಸಿ ಎಂದು ಕೇಳುವಲ್ಲಿ ಶಿಕ್ಷಣ ಮತ್ತು ಪ್ರಜ್ಞೆ ದೊಡ್ಡದು. ಈಗ ದೇವನೂರು ಮಹಾದೇವ ಅಂಥವರು ಪತ್ರ ಬರೆದರೆ ಸಾಕು ಹೋರಾಟದ ರೂಪ ಪಡೆಯುತ್ತದೆ. ಫ್ಯೂಡಲ್ ಸೊಸೈಟಿ ಇಂದಿಗೂ ಕೆಳ ವರ್ಗದವರನ್ನು ಅವರ ಮನೆಯ ಆಳಾಗಿರಬೇಕೆಂದು ಬಯಸುತ್ತವೆ ಎಂದರು.
ಕಥೆಗಾರ ತುಂಬಾಡಿ ರಾಮಯ್ಯ ದಲಿತ ಅಭಿವ್ಯಕ್ತಿ ಮತ್ತು ಹೋರಾಟದಲ್ಲಿ ಕನ್ನಡ ಕುರಿತು ಮಾತನಾಡಿ, ಹೋರಾಟಗಾರ ಕೃಷ್ಣಪ್ಪ ಚಳವಳಿಗಾರರಾಗಿದ್ದರು. ಬರಹಗಾರರಾಗಿರಲಿಲ್ಲ. ದೇವನೂರು ಮಹಾದೇವ ಬರಹಗಾರರಾಗಿದ್ದರು. ಚಳವಳಿಗಾರರಾಗಿರಲಿಲ್ಲ. ಆದರೆ ಬೀದಿಗಿಳಿದು ಹೋರಾಟ ಮಾಡುವ ಆಯಾಮಗಳು ಭಿನ್ನವಾಗಿವೆ ಎಂದು ಹೇಳಿದರು.
ವೈಚಾರಿಕ ಪ್ರಚಾರಕ ಡಾ. ಎಚ್.ಆರ್.ಸ್ವಾಮಿ ಶಿಕ್ಷಣದಲ್ಲಿ ವೈಜ್ಞಾನಿಕ ಮನೋಧರ್ಮ ಎಂಬ ವಿಷಯ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, ಮೌಢ್ಯ ನಮ್ಮನ್ನು ಸುತ್ತುವರಿದಿದೆ. ಪರಂಪರಾನುಗತವಾದ ನಂಬಿಕೆಗಳಿಂದ ಮೌಢ್ಯ ಉಳಿಯುತ್ತದೆ ಎಂದರು.
ಸಂವಾದದಲ್ಲಿ ಅನಂತ್ ನಾಡಿಗ್, ಟಿ.ದಾದಾಪೀರ್, ನವೀನ್ ಪೆನ್ನಯ್ಯ, ಸಿ.ಚಕ್ರವರ್ತಿ, ಮಿಲ್ಟ್ರೀ ಶ್ರೀನಿವಾಸ್, ಸುನೀತಾ, ಉಮಾ ಭಾಗವಹಿಸಿದ್ದರು. ಹಿರಿಯ ಚಿಂತಕ ಅಗ್ರಹಾರ ಕೃಷ್ಣಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ರವಿಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಅಧ್ಯಕ್ಷ ರವಿ ದಳವಾಯಿ, ಸದ್ಗುರು ಜನಸೇವಾ ಫೌಂಡೇಶನ್ ಅಧ್ಯಕ್ಷ ಟಿ.ಎನ್.ಜಗದೀಶ್, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಪ್ರಮುಖರಾದ ಡಾ. ಎಚ್.ಎಂ.ಮರುಳಸಿದ್ದಯ್ಯ ಪಟೇಲ್, ಮಂಜುನಾಥ್ ಮತ್ತಿತರರಿದ್ದರು.