ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡಕ್ಕೆ ಧಕ್ಕೆ

9CBP2
Published on

ಚಿಕ್ಕಬಳ್ಳಾಪುರ/ಮಂಚೇನಹಳ್ಳಿ : ದೇಶದಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಯ ಪ್ರಭಾವದಿಂದಾಗಿ ಕನ್ನಡ ಸೇರಿ ಸ್ಥಳೀಯ ಭಾಷೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಉಪನ್ಯಾಸಕ ಎನ್.ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.

ಮಂಚೇನಹಳ್ಳಿ ಹೋಬಳಿ ಹಳೇಹಳ್ಳಿಯಲ್ಲಿ ಗೌರಿಬಿದನೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.

ದೇಶದಲ್ಲಿ ಬಹುತೇಕ ಸ್ಥಳೀಯ ಭಾಷೆಗಳಿಗೆ ಆಂಗ್ಲ ಮತ್ತು ಹಿಂದಿ ಭಾಷೆಗಳು ಕಂಟಕವಾಗಿ ಪರಿಣಮಿಸಿವೆ. 40 ವರ್ಷಗಳಲ್ಲಿ ಹಿಂದಿ ಭಾಷೆ ಶೇ.48 ರಷ್ಟು, ತುಳು ಶೇ.7 ರಷ್ಟು, ಕನ್ನಡ ಶೇ.3.75 ರಷ್ಟು ಪ್ರಗತಿ ಕಂಡಿವೆ. ಈಗಲಾದರೂ ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾವಿರಾರು ವರ್ಷ ಇತಿಹಾಸವಿರುವ ಕನ್ನಡ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಪ್ರಸ್ತುತ ಸುಮಾರು 6500 ಕ್ಕೂ ಹೆಚ್ಚು ಭಾಷೆಗಳ ಪೈಕಿ ಕನ್ನಡ 27 ನೇ ಸ್ಥಾನದಲ್ಲಿದೆ ಎಂದರು.

ಶಾಸನ ಸಂಶೋಧಕ ಮಂಚೇನಹಳ್ಳಿಯ ಧನಪಾಲ್ ಮಾತನಾಡಿ, ಶಾಸನಗಳ ಕೆಳಗೆ ಯಾವುದೇ ನಿಧಿಯೂ ಇರುವುದಿಲ್ಲ. ಶಾಸನಗಳನ್ನು ಓದುವುದರಿಂದ ಕೆಟ್ಟದಾಗುತ್ತದೆ ಎಂಬುದು ಸುಳ್ಳು. ಮಹತ್ವದ ವಿಚಾರಗಳ ಬಗ್ಗೆ ತಿಳಿಯುತ್ತದೆ ಎಂದು ತಿಳಿಸಿದರು.

ತಾಲೂಕು ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಸಾ.ನಾ.ಲಕ್ಷ್ಮಣಗೌಡ ಮಾತನಾಡಿ, ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಖರೀದಿಸಿ, ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಕನ್ನಡ ಪರ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಭಾನಾರಾಯಣಗೌಡ, ಕಾರ್ಯದರ್ಶಿ ಎಚ್.ಎನ್.ಕಿರಣ್‌ಕುಮಾರ್, ತಾಪಂ ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ, ಮುಖಂಡರಾದ ಚಿಕ್ಕಣ್ಣ, ಗಂಗಾಧರಪ್ಪ, ನಂಜುಂಡಪ್ಪ, ರವಿಚಂದ್ರ, ಕಾಮಣ್ಣರೆಡ್ಡಿ, ಹರಿಕೃಷ್ಣ ಹಾಗೂ ಚಂದ್ರಶೇಖರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net