ಅನ್ಯ ಭಾಷೆ ವ್ಯಾಮೋಹದಿಂದ ಕನ್ನಡ ಭಾಷೆಗೆ ಪೆಟ್ಟು

04Kush01
Published on

ಮಡಿಕೇರಿ : ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ಭಾಷೆಗೆ ಕನ್ನಡಿಗರಿಂದಲೇ ಪೆಟ್ಟು ಬೀಳುತ್ತಿದೆ ಎಂದು ಕುಶಾಲನಗರ ಅನುಗ್ರಹ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನಾ ಬೇಸರ ವ್ಯಕ್ತಪಡಿಸಿದರು.


ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿ, ಕನ್ನಡಿಗರ ನಿರ್ಲಕ್ಷ್ಯ ಮತ್ತು ಪ್ರತಿಷ್ಠೆಯಿಂದ ಕನ್ನಡ ನಶಿಸಿ ಹೋಗುತ್ತಿದೆಯೇ ವಿನಃ ಬೇರೆ ಭಾಷೆಯ ದಬ್ಬಾಳಿಕೆಯಿಂದಲ್ಲ ಎಂದರು.


ಪಾಲಕರು ತಮ್ಮ ಪ್ರತಿಷ್ಠೆಗಾಗಿ ಅಪ್ಪ, ಅಮ್ಮ ಹೇಳಿಸುವ ಬದಲಾಗಿ ಮಮ್ಮಿ, ಡ್ಯಾಡಿ ಬಳಕೆ ಮಾಡಿಸುತ್ತಿರುವುದು ಕನ್ನಡಕ್ಕೆ ಬಂದಿರುವ ದೊಡ್ಡ ದುರಂತ. ಕನ್ನಡದ ಜತೆಯಲ್ಲಿ ಅನ್ಯಭಾಷೆಗೂ ಗೌರವ ನೀಡಬೇಕು. ಆದರೆ ಅನ್ಯ ಭಾಷೆಗೆ ಮಾರುಹೋಗದೆ ಎಷ್ಟು ಬಳಕೆ ಮಾಡಬೇಕೋ ಅಷ್ಟಕ್ಕೆ ಸೀಮಿತಗೊಳಿಸಬೇಕು. ಕನ್ನಡವೇ ನಮ್ಮ ಉಸಿರಾಗಬೇಕು. ಅದರ ಬಗ್ಗೆ ಕೀಳಿರಿಮೆ ಆಗಬಾರದು. ಅನ್ಯ ಭಾಷೆಯಿಂದ ಖಂಡಿತವಾಗಿಯೂ ಕನ್ನಡ ನಶಿಸುತ್ತಿಲ್ಲ ಎಂಬುದರ ಬಗ್ಗೆ ಅರಿವಿರಲಿ ಎಂದು ಸಲಹೆ ನೀಡಿದರು.


ಸೃಜನಶೀಲತೆ ಎಂಬುದು ಕನ್ನಡದಲ್ಲಿ ಮಾತ್ರ ಸಿಗಲಿದೆ. ಕನ್ನಡ ಭಾಷೆಗೆ ತನ್ನದೇ ಆದ ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯ, ಸಂಸ್ಕಾರ ನೀಡಿದೆ ಎನ್ನುವುದನ್ನು ಯಾರೂ ಮರೆಯಬಾರದು. ಎಲ್ಲ ಭಾಷಿಗರಿಗೂ ಆಶ್ರಯ ನೀಡುವ ಕನ್ನಡ ನಾಡಿಗೆ ದ್ರೋಹ ಮಾಡಿದರೆ ಕನ್ನಡಿಗರು ಎಂದಿಗೂ ಸಹಿಸುವುದಿಲ್ಲ ಎಂದರು.


ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ, ವಾಗ್ಮೀ ಶ್ರೀಶಾ ಮಾತನಾಡಿ, ರಾಜ್ಯ ಪುನರ್ವಿಂಗಡನೆ ಅವಧಿಯಲ್ಲಿ ವಿಶಾಲ ಮೈಸೂರು ರಾಜ್ಯ ಎಂಬ ಹೆಸರಿದ್ದ ಕನ್ನಡ ನಾಡಿಗೆ 1973 ರಲ್ಲಿ ಕರ್ನಾಟಕ ರಾಜ್ಯ ಎಂಬ ಹೆಸರು ನಾಮಕರಣವಾಗಿದ್ದು, ಈ ವರ್ಷ 50 ವರ್ಷ ತುಂಬಿರುವುದು ನಮ್ಮ ಹೆಮ್ಮೆ ಎಂದರು.


ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗೇಶ್ ಮಾತನಾಡಿ, ಕನ್ನಡ ಭಾಷೆ ಮುದ್ದಾದ ಮತ್ತು ಸಿಹಿಯಾದ ಭಾಷೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಕನ್ನಡ ಉಳಿದಿದೆ. ಆದರೆ ನಗರ ಪ್ರದೇಶದಲ್ಲಿ ಕನ್ನಡ ತನ್ನ ತನವನ್ನು ಕಳೆದುಕೊಳ್ಳುತ್ತಿರುವುದು ದುರಂತ. ನಾವು ಕನ್ನಡವನ್ನು ಉಳಿಸಿ ಬೆಳೆಸಿದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಿ.ಎಂ.ಪ್ರವೀಣ್ ಕುಮಾರ್ ವಹಿಸಿದ್ದರು. ಐಕ್ಯೂಎಸ್ ಸಂಚಾಲಕಿ ಎಂ.ರಶ್ಮಿ, ಕನ್ನಡ ವಿಭಾಗದ ಮುಖ್ಯಸ್ಥ ಸುನಿಲ್ ಕುಮಾರ್, ಉಪನ್ಯಾಸಕರಾದ ಹರ್ಷ ಕುಮಾರ್, ಸುಧಾಕರ್ ಶೆಟ್ಟಿ, ರಮೇಶ್ ಚಂದ್ರ, ಕುಸುಮ, ವಂದನಾ, ರಾಧಿಕಾ, ಸೂರ್ಯ, ರಾಜೇಶ್, ಚರಣ್ ರಾಜ್, ನಟರಾಜ್, ಮನೋಜ್, ಹರ್ಷಿತಾ, ಶಾಲಿನಿ, ದೈಹಿಕ ಶಿಕ್ಷಣ ನಿರ್ದೇಶಕಿ ಪಿ.ಪಿ.ಜಯಂತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net