ಅನ್ಯ ಭಾಷಿಕರಿಗೆ ಕನ್ನಡ ಕಲಿಸಿ, ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ.ಪ್ರಸಾದ್ ಆಶಯ, ತಿಂಗಳ ಹೆಜ್ಜೆ ಗುರುತು ಕಾರ್ಯಕ್ರಮಕ್ಕೆ ಚಾಲನೆ

14 ank news and photos 01
Published on

ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕಾಯಕವನ್ನು ಪ್ರಾಮಾಣಿಕವಾಗಿ ಮಾಡಿದರೆ ಎಲ್ಲರಲ್ಲೂ ಭಾಷಾ ಅಭಿಮಾನ ಹೆಚ್ಚಾಗಲಿದೆ ಎಂದು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ.ಪ್ರಸಾದ್ ಹೇಳಿದರು.

ಬೊಮ್ಮಸಂದ್ರ ಕೈಗಾರಿಕಾ ಸಂಘದ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ತಿಂಗಳ ಹೆಜ್ಜೆ ಗುರುತು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರೊನಾ ನಂತರ ಮಕ್ಕಳಲ್ಲಿ ಪುಸ್ತಕದ ಮೇಲೆ ಆಸಕ್ತಿ ಕಡಿಮೆ ಆಗಿದೆ. ಲ್ಯಾಪ್‌ಟಾಪ್ ಬಳಕೆಯಿಂದ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯವಿಲ್ಲ. ನಮ್ಮ ಹಿರಿಯರು ಪುಸ್ತಕ ಓದಿಯೇ ಸಾಕಷ್ಟು ಜ್ಞಾನ ಪಡೆದು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಈ ನಿಟ್ಟಿನಲ್ಲಿ ಆನೇಕಲ್ ತಾಲೂಕು ಕಸಾಪ ಉತ್ತಮ ಕೆಲಸ ಮಾಡುತ್ತಿದ್ದು, ಇದಕ್ಕೆ ಬೊಮ್ಮಸಂದ್ರ ಕೈಗಾರಿಕಾ ಸಂಘ ಕೂಡ ಸಹಕಾರ ನೀಡಲಿದೆ ಎಂದರು.

ಖಜಾಂಚಿ ಸಂಜೀವ್ ಸಾವಂತ್ ಮಾತನಾಡಿ, ಉತ್ತರ ಭಾರತದ ಸಾಕಷ್ಟು ಕಾರ್ಮಿಕರು ಬೊಮ್ಮಸಂದ್ರ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕನ್ನಡ ಕಲಿಯುವಂತೆ ಪ್ರೋತ್ಸಾಹಿಸುವ ಕಾರ್ಯಕ್ಕೆ ಸಂಘ ಸಹಕಾರ ನೀಡಲಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಆದೂರು ಪ್ರಕಾಶ್ ಮಾತನಾಡಿ, ಕನ್ನಡದ ಶಕ್ತಿ ಅಪಾರ. ಆದರೆ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಟ ಎಂಬುದೇ ಮರೆತು ಹೋಗುತ್ತಿದ್ದು, ಕೇವಲ ಓದು ಓದು ಎಂದು ಮಕ್ಕಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದರು.

ಉತ್ತಮ ಸಂದೇಶಗಳನ್ನು ಓದಬೇಕು, ಉತ್ತಮ ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದ ಅವರು, ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪರಿಷತ್ ಮಾಡಲಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಹೆಬ್ಬಗೋಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಣ್ಣ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದ ಬಂದ ಕನ್ನಡ ಸಾಹಿತ್ಯ ಪರಿಷತ್ತು ಇಂದಿಗೂ ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಾಡುತ್ತಿದೆ. ತಿಂಗಳ ಸಾಹಿತ್ಯ ಪರಿಷತ್ತಿನ ಪುಸ್ತಕದ ಚಂದಾದಾರರಾಗಿ ನಾವೆಲ್ಲರೂ ಕನ್ನಡ ಬೆಳೆಸುವ ಕೆಲಸಕ್ಕೆ ಕೈ ಜೋಡಿಸಬೇಕು ಎಂದರು.

ಹೆಬ್ಬಗೋಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಣ್ಣ, ಬಿಐಎ ಸಂಘದ ವ್ಯವಸ್ಥಾಪಕ ಶಿವಕುಮಾರ್, ಪುರಸಭಾ ಅಧ್ಯಕ್ಷ ಗೋಪಾಲ್, ಪುರಸಭಾ ಸದಸ್ಯ ಕಿರಣ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್, ಗೌರವ ಕಾರ್ಯದರ್ಶಿ ಗೋವಿಂದರಾಜು, ಮಹೇಶ್ ಊಗಿನಹಳ್ಳಿ, ಸದಸ್ಯರಾದ ಮಲ್ಲಿಕಾರ್ಜುನ್ ಆರಾಧ್ಯ, ಬಿಟಿಎಸ್ ಮುನಿರಾಜು, ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net