

ಬಾಗಲಕೋಟೆ: ವಿಮಾನ ನಿಲ್ದಾಣ ಹಾಗೂ ಕೈಗಾರಿಕೆ ಸ್ಥಾಪನೆಗೆ ಬೇಕಾದ ಜಮೀನು ಖರೀದಿಗೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ರೈತರಿಗೆ ಹೊಸ ಭೂ ಸ್ವಾಧೀನ ಅನ್ವಯ ಎಕರೆಗೆ ಸರ್ಕಾರದಿಂದ ೯ ಲಕ್ಷ ರೂ. ಪರಿಹಾರ ದೊರೆಯುತ್ತದೆ. ಅನ್ನದಾತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಎಕರೆಗೆ ೧೮ ಲಕ್ಷ ರೂ., ಅವರ ಮಕ್ಕಳಿಗೆ ಉದ್ಯೋಗ ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಘೋಷಣೆ ಮಾಡಿದರು.
ಭೂಸ್ವಾಧೀನಕ್ಕೆ ರೈತರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾಡಳಿತ ಭವನದ ಸಭಾಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾದಾಮಿ, ಐಹೊಳೆ, ಪಟ್ಟದಕಲ್ಲಿನಲ್ಲಿ ಪ್ರವಾಸಿ ತಾಣಗಳಿವೆ. ದೇಶ, ವಿದೇಶದಿಂದ ಜನ ಬರುತ್ತಾರೆ. ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಆಗಮಿಸುವ ಉದ್ಯಮಿಗಳಿಗೆ ವಿಮಾನ ನಿಲ್ದಾಣ, ಹೆದ್ದಾರಿಗಳು ಅವಶ್ಯಕವಾಗಿವೆ. ಈ ಹಿನ್ನೆಲೆಯಲ್ಲಿ ರೈತರು ಅವಕಾಶ ನೀಡಬೇಕು. ಒತ್ತಾಯ ಮಾಡಿ ಭೂಮಿ ಪಡೆದುಕೊಳ್ಳವುದಿಲ್ಲ. ಇದಕ್ಕೆ ಹಠಮಾರಿ ಧೋರಣೆ ಇಲ್ಲವೇ ಇಲ್ಲ ಎಂದು ತಿಳಿಸಿದರು.
ಹಲಕುರ್ಕಿ ಗ್ರಾಮದ ಸುತ್ತಮುತ್ತ ಒಟ್ಟು ಎರಡು ಸಾವಿರ ಎಕರೆ ಭೂಮಿ ಬೇಕು. ಈ ಪೈಕಿ ೪೦೦ ಎಕರೆ ಭೂಮಿ ಸರ್ಕಾರದ ಅಧೀನದಲ್ಲಿದೆ. ಉಳಿದ ೧೬೦೦ ಎಕರೆ ಜಮೀನನ್ನು ರೈತರಿಂದ ಖರೀದಿಸಲಾಗುತ್ತದೆ. ಈಗಾಗಲೇ ಶೇ.೭೫ ರೈತರ ಒಪ್ಪಿಗೆ ಇದೆ. ಶೇ.೨೫ ರೈತರು ಅಂದರೆ ೨೫೦ ಎಕರೆ ಪ್ರದೇಶ ಹೊಂದಿರುವ ರೈತರು ಒಪ್ಪಿಗೆ ಕೊಟ್ಟಿಲ್ಲ. ಈ ಬಗ್ಗೆ ಅವರ ಮನವೊಲಿಸಲಾಗುವುದು. ಕೈಗಾರಿಕೆ ಸ್ಥಾಪನೆಯಿಂದ, ವಿಮಾನ ಓಡಾಟದಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಗ್ರಾಮಕ್ಕೆ ಯಾವುದೇ ಸಮಸ್ಯೆ ಇಲ್ಲ. ಶೀಘ್ರದಲ್ಲಿ ಹೆದ್ದಾರಿ ಕೂಡ ೫೦೦ ಮೀಟರ್ ಅಂತರದಲ್ಲಿ ಹಾಯ್ದು ಹೋಗಲಿದೆ. ಕಾಂಗ್ರೆಸ್ ಸ್ನೇಹಿತರು ಹಾಗೂ ಕೆಲವರು ಸುಖಾಸುಮ್ಮನೆ ರೈತರ ದಾರಿ ತಪ್ಪಿಸುತ್ತಿದ್ದಾರೆ. ಉದ್ಯಮ, ವಿಮಾನ ನಿಲ್ದಾಣ ಸ್ಥಾಪನೆಗೆ ಅವಕಾಶ ನೀಡಿದಲ್ಲಿ ಈ ಭಾಗದ ಬೆಳವಣಿಗೆ ಆಗಲಿದೆ. ಮೈಸೂರು ಭಾಗದಲ್ಲಿ ೧೫೦ ವರ್ಷಗಳ ಹಿಂದೆಯೇ ಕೈಗಾರಿಕೆಗಳು ಆರಂಭವಾಗಿವೆ. ಇಂದು ಅಲ್ಲಿನ ಬೆಳವಣಿಗೆ ನಿಬ್ಬೆರಗಾಗಿಸುತ್ತಿದೆ. ನಮ್ಮ ಭಾಗದಲ್ಲಿಯೂ ಅದೇ ರೀತಿ ಸಮಗ್ರ ಅಭಿವೃದ್ಧಿ ಆಗಬೇಕು ಎನ್ನುವುದು ನನ್ನ ಕನಸು ಎಂದು ನಿರಾಣಿ ತಿಳಿಸಿದರು.
*ರೈತರಿಗೆ ನೀಡಿರುವ ಭರವಸೆ
ಹಲಕುರ್ಕಿ ಗ್ರಾಮದ ಜಮೀನುಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದಿಲ್ಲ. ಹಲವೆಡೆ ಬಿತ್ತನೆ ಮಾಡುತ್ತಿಲ್ಲ. ಕಾಲುವೆ ಮೂಲಕ ನೀರು ಹರಿದು ನೀರಾವರಿ ಆಗುವ ಸಾಧ್ಯತೆ ಕಡಿಮೆ ಇದೆ. ವಿಮಾನ ನಿಲ್ದಾಣ, ಕೈಗಾರಿಕೆ ಸ್ಥಾಪನೆಗೆ ಯೋಗ್ಯ ಸ್ಥಳವಾಗಿದೆ. ಸದ್ಯ ಕಂದಾಯ ಇಲಾಖೆ ಬೆಲೆ ಅನ್ವಯ ಎಕರೆಗೆ ೧.೭೫ ಲಕ್ಷ ರೂ. ಇದೆ. ಇದರ ನಾಲ್ಕು ಪಟ್ಟು ಅಂದರೆ ೯ ಲಕ್ಷ ರೂ. ಪ್ರತಿ ಎಕರೆಗೆ ಪರಿಹಾರ ನೀಡಬಹುದು. ಆದರೆ, ಸರ್ಕಾರ ಪ್ರತಿ ಎಕರೆಗೆ ೧೮ ಲಕ್ಷ ರೂ. ಬೆಲೆ ನಿಗದಿಗೊಳಿಸಲಿದೆ. ಅಲ್ಲದೆ, ಹೊಲದಲ್ಲಿರುವ ಗಿಡ, ಮನೆ, ಬಾವಿ ಇದಕ್ಕೆ ಪ್ರತ್ಯೇಕ ಪರಿಹಾರ ನೀಡಲಾಗುವುದು. ರೈತರು ಈ ಹಣದಲ್ಲಿ ಬೇರೆ ಭೂಮಿ ಪಡೆದುಕೊಂಡಲ್ಲಿ ನೋಂದಣಿ ಶುಲ್ಕಕ್ಕೆ ರಿಯಾಯಿತಿ ನೀಡಲಾಗುವುದು. ಸರೋಜಿನಿ ಮಹಿಷಿ ವರದಿ ಅನ್ವಯ ಶೇ.೭೫ ಉದ್ಯೋಗವನ್ನು ಅವರ ಮಕ್ಕಳ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ನೀಡಲಾಗುವುದು. ಎಸ್ಸಿ,ಎಸ್ಟಿ ರೈತರು ಇದ್ದಲ್ಲಿ ಇದೇ ಪ್ರದೇಶದಲ್ಲಿ ಶೇ.೨೨ರಷ್ಟು ಕೈಗಾರಿಕೆ ಭೂಮಿ ನೀಡಲು ಅವಕಾಶವಿದೆ. ಪರಿಹಾರ ನಿರಾಕರಣೆ ಮಾಡಿದಲ್ಲಿ ೧೦ ಸಾವಿರಕ್ಕೂ ಹೆಚ್ಚು ಚದುರ ಅಡಿ ಸರ್ಕಾರ ನಿಯಮಗಳ ಅನುಸಾರ ಭೂಮಿ ಕಳೆದುಕೊಂಡ ರೈತರಿಗೆ ನೀಡಲಾಗುವುದು ಎಂದು ಸಚಿವ ಮುರುಗೇಶ ನಿರಾಣಿ ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಎಸ್ಪಿ ಜಯಪ್ರಕಾಶ ಹಕ್ಕರಕಿ, ಎಸಿ ಶ್ವೇತಾ ಬೀಡಿಕರ, ಬಾದಾಮಿ ತಹಸೀಲ್ದಾರ್ ಜಿ.ಬಿ.ಮಜ್ಜಗಿ, ಜಿಪಂ ಮಾಜಿ ಸದಸ್ಯ ಹೂವಪ್ಪ ರಾಠೋಡ ಸೇರಿದಂತೆ ಇತರರು ಇದ್ದರು.