

ಮೈಸೂರು: ಅನ್ಯಭಾಗ್ಯ ಯೋಜನೆಯ ಫಲಾನುಭವಿಗಳಿಗೆ ನಗದು ವರ್ಗಾವಣೆ ಶುರುವಾಗಿದ್ದು, ಜಿಲ್ಲೆಯಲ್ಲಿರುವ 23 ಲಕ್ಷ ಫಲಾನುಭವಿಗಳಿಗೆ ಇದರ ಲಾಭ ದೊರೆಯಲಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹರ ವ್ಯವಹಾರಗಳ ಇಲಾಖೆಯ ಆಹಾರ ತಂತ್ರಾಂಶದಲ್ಲಿ ಲಭ್ಯವಿರುವ ದತ್ತಾಂಶ ಮಾಹಿತಿಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದು, ಜುಲೈನಿಂದ ಅಂತ್ಯೋದಯ ಅನ್ನ ಯೋಜನೆ (ಎಎವೈ) ಹಾಗೂ ಆದ್ಯತಾ ಪಡಿತರ ಕುಟುಂಬಗಳು(ಪಿಎಚ್‌ಎಚ್) ಪಡಿತರಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ ನಗದು ವರ್ಗಾವಣೆ ಮಾಡಲಾಗುತ್ತಿದೆ.
ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ. ಆದರೆ, ಅಕ್ಕಿ ಅಭಾವ ಉಂಟಾಗಿದೆ. ಆದ್ದರಿಂದ 5 ಕೆಜಿ ಅಕ್ಕಿಯ ಬದಲಿಗೆ ಪಡಿತರ ಚೀಟಿ ಕುಟುಂಬದಲ್ಲಿನ ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿ.ಗೆ 34 ರೂ.5 ಕೆ.ಜಿ.= 170 ರೂ.ಗಳಂತೆ ಪಡಿತರ ಕುಟುಂಬದ ಮುಖ್ಯಸ್ಥರ ಖಾತೆಗೆ ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ ರವಾನಿಸಲಾಗುತ್ತದೆ. ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬವು ಈಗಾಗಲೇ ಪ್ರತಿ ತಿಂಗಳು 35 ಕೆ.ಜಿ ಆಹಾರ ಧಾನ್ಯ ಪಡೆಯುತ್ತಿದೆ. ಆದ್ದರಿಂದ ಅಂತಹ ಅಂತ್ಯೋದಯ ಪಡಿತರ ಚೀಟಿ ಕುಟುಂಬಗಳಿಗೆ ನಗದು ವರ್ಗಾವಣೆ ಸೌಲಭ್ಯ ನೀಡುವುದಿಲ್ಲ. ಆದರೆ ಅಂತ್ಯೋದಯ ಪಡಿತರ ಚೀಟಿಯ ಕುಟುಂಬದಲ್ಲಿ 4 ಸದಸ್ಯರಿದ್ದರೆ ಸದರಿ ಕುಟುಂಬವು 170 ರೂ (345*1), 5 ಸದಸ್ಯರನ್ನು ಹೊಂದಿರುವ ಕುಟುಂಬವು 340 ರೂ (345*2) ಮತ್ತು 6 ಸದಸ್ಯರನ್ನು ಹೊಂದಿರುವ ಕುಟುಂಬವು 510 ರೂ (345*3) ಪಡೆಯುತ್ತದೆ. ಹೆಚ್ಚಿನ ಸದಸ್ಯರಿದ್ದಲ್ಲಿ ಇದೇ ಅನುಪಾತವು ಮುಂದುವರಿಯುತ್ತದೆ.
ಕುಟುಂಬದ ಮುಖ್ಯಸ್ಥ ಆಧಾರ್ ಜೋಡಣೆ ಮಾಡಿರುವ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಅಂತ್ಯೋದಯ, ಆದ್ಯತಾ ಪಡಿತರ ಚೀಟಿಯ ಕುಟುಂಬಗಳು ಈ ಸೌಲಭ್ಯವನ್ನು ಪಡೆಯಲು ಅರ್ಹರು. ಕಳೆದು 3 ತಿಂಗಳಿನಲ್ಲಿ ಪಡಿತರ ಆಹಾರ ಧಾನ್ಯವನ್ನು ಪಡೆದುಕೊಂಡಿರುವ ಕುಟುಂಬಗಳು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿದ್ದಾರೆ.
ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳನ್ನು ಈ ನಗದು ವರ್ಗಾವಣೆ ಸೌಲಭ್ಯದಿಂದ ಹೊರಗಿಡಲಾಗಿದೆ.
ಕುಟುಂಬದ ಮುಖ್ಯಸ್ಥರನ್ನು ನಿಗದಿಪಡಿಸದ ಪಡಿತರ ಕುಟುಂಬಗಳು ಮುಖ್ಯಸ್ಥರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ. ಜತೆಗೆ, ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳು ರಾಷಿ ್ಟ್ರೀಯ ಆಹಾರ ಭದ್ರತಾ ಕಾಯ್ದೆಯಲಿ ್ಲ ಕಡ್ಡಾಯಗೊಳಿಸಿರುವಂತೆ ಮಹಿಳಾ ಸದಸ್ಯರಿರುವ ಪಡಿತರ ಚೀಟಿಯಲ್ಲಿನ ಹಿರಿಯ ಮಹಿಳೆಯನ್ನು ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸಿಕೊಳ್ಳಬೇಕು. 2ನೇ ಕುಟುಂಬದ ಮುಖ್ಯಸ್ಥರನ್ನು ನಿಷ್ಕ್ರಿಯಗೊಳಿಸಬೇಕು ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್ ತಿಳಿಸಿದ್ದಾರೆ.
ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಪಡಿತರ ಚೀಟಿಗಳ ವಿವರಗಳನ್ನು ತಾಲೂಕು ಕಚೇರಿಯ ಆಹಾರ ಶಾಖೆಗೆ ಒದಗಿಸಲಾಗಿದೆ. ಆಹಾರ ಇಲಾಖೆಯ ಸಿಬ್ಬಂದಿ ಸಹ ಕುಟುಂಬದ ಮುಖ್ಯಸ್ಥರನ್ನು ನಿರ್ಧರಿಸಲು ಸಹಕರಿಸುತ್ತಾರೆ. ಪಡಿತರ ಕುಟುಂಬದ ಮುಖ್ಯಸ್ಥರನ್ನು ಗುರುತಿಸಲು ಅವಶ್ಯ ಸೌಲಭ್ಯವನ್ನು ಆಹಾರ ತಂತ್ರಾಂಶದಲ್ಲೂ ಕಲ್ಪಿಸಲಾಗಿದೆ. ಈ ರೀತಿಯ ಸಮಸ್ಯೆಯನ್ನು ಪರಿಹರಿಸಿಕೊಂಡ ನಂತರ ನಗದು ವರ್ಗಾವಣೆ ಸೌಲಭ್ಯ ನೀಡಲು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರು ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿಲ್ಲದಿದ್ದರೆ, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಿರದಿದ್ದರೆ, ಬ್ಯಾಂಕ್ ಖಾತೆಯ ಮಾಹಿತಿಯು ಈವರೆಗೂ ಲಭ್ಯವಿಲ್ಲದಿದ್ದಲ್ಲಿ ಈ ಸೌಲಭ್ಯ ದೊರೆಯುವುದಿಲ್ಲ. ಇದನ್ನು ಸರಪಡಿಸಿಕೊಂಡು ನಿಷ್ಕ್ರಿಯ ಬ್ಯಾಂಕ್ ಖಾತೆಯನ್ನು ಪುನರ್ಜೀವಗೊಳಿಸಿದ ನಂತರ ಅಂತಹ ಪಡಿತರ ಚೀಟಿ ಕುಟುಂಬದ ಮುಖ್ಯಸ್ಥರ ಖಾತೆಗೆ ನಗದು ವರ್ಗಾವಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಜೂನ್ ತಿಂಗಳಲ್ಲಿ ಆಹಾರ ಧಾನ್ಯವನ್ನು ಪಡೆದ ಪಡಿತರ ಕುಟುಂಬಗಳನ್ನು ಜುಲೈ ತಿಂಗಳ ನಗದು ವರ್ಗಾವಣೆಗೆ ಪರಿಗಣಿಸಲಾಗಿದ್ದು, ಜು.20ರ ಒಳಗೆ ತಮ್ಮ ಸಕ್ರಿಯ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿದ ಪಡಿತರ ಚೀಟಿ ಕುಟುಂಬಗಳಿಗೆ ಆಗಸ್ಟ್‌ನಲ್ಲಿ ನಗದು ವರ್ಗಾವಣೆ ಸೌಲಭ್ಯ ದೊರೆಯಲಿದೆ. ನಗದು ವರ್ಗಾವಣೆ ಸೌಲಭ್ಯದ ಪ್ರಕ್ರಿಯೆಯನ್ನು ಜಿಲ್ಲೆಗಳ ಹಂತದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.