

ಚಿತ್ರದುರ್ಗ: ರಾಜ್ಯದಲ್ಲಿ ಜಾರಿಯಲ್ಲಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ರೈತರು, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಅನ್ನಭಾಗ್ಯ ಅಕ್ಕಿ ಜತೆ ರಾಗಿ, ಜೋಳ ಪಡಿತರದಾರರಿಗೆ ನೀಡುವುದರಿಂದ ಪೌಷ್ಠಿಕಾಹಾರ ಜತೆಗೆ ರಾಜ್ಯದಲ್ಲಿ ಕೃಷಿಕರಿಗೆ ಮಾರಾಟದ ಸಮಸ್ಯೆ ತಪ್ಪಲಿದೆ ಎಂದರು.
ರೈತರ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ ಮಾತನಾಡಿ, ಕೇಂದ್ರ ಸರ್ಕಾರ ಹಿಂಪಡೆದ ಮೇಲೂ ರಾಜ್ಯ ಸರ್ಕಾರ ಮೀನಾಮೇಷ ಎಣಿಸುವುದು ಸರಿಯಲ್ಲ. ಕಾಯ್ದೆ ಜತೆಗೆ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿರುವುದನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕೊಬ್ಬರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು. ಉಚಿತ 10 ಕೆ.ಜಿ ಅಕ್ಕಿ ನೀಡಲು ಕೇಂದ್ರದಿಂದ ಸ್ಪಂದನೆ ದೊರೆಯದಿದ್ದರೆ, ಪರ್ಯಾಯವಾಗಿ ರಾಜ್ಯದೊಳಗೆ ಬೆಳೆಯುವ ರಾಗಿ, ಜೋಳ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು ಮಾತನಾಡಿ, ಬಿಜೆಪಿ ಅವಧಿಯಲ್ಲಿ ಜಾರಿಯಾದ ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ, ಗೋಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಗಳು ರೈತರನ್ನು ಹೈರಾಣಾಗಿಸಿದೆ. ಆದ್ದರಿಂದ ಈ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನಿಯಮ ಮೀರಿ ಸರ್ಕಾರಿ ಭೂಮಿಯನ್ನು ಸಂಘ ಪರಿವಾರಕ್ಕೆ ಮಂಜೂರು ಮಾಡಿದ್ದು, ವಶಕ್ಕೆ ಪಡೆಯಬೇಕು.
ಎಪಿಎಂಸಿ ಮಾರುಕಟ್ಟೆಯನ್ನು ರೈತ ಸ್ನೇಹಿಯಾಗಿ ರೂಪಿಸಬೇಕು. ರೈತರಿಗೆ ಆಗುತ್ತಿರುವ ವಂಚನೆ, ಮೋಸ ತಪ್ಪಿಸಬೇಕು. ಕೇಂದ್ರ ಸರ್ಕಾರ 2022 ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಿದೆ. ಅದನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಅಧಿವೇಶನದಲ್ಲೇ ಸಿಎಂ ಘೋಷಿಸಬೇಕು ಎಂದು ಕೋರಿದರು.
ತಾಲೂಕಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೆ.ಪಿ.ಭೂತಯ್ಯ, ಸಿ.ನಾಗರಾಜ್, ಎಸ್.ರೇವಣ್ಣ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಂಪಣ್ಣ, ಸಿದ್ಧ್ದಪ್ಪ, ಎಂ.ಬಿ.ತಿಪ್ಪೇಸ್ವಾಮಿ, ಕೆ.ಸಿ.ಹೊರಕೇರಪ್ಪ, ಬಿ.ಒ.ಶಿವಕುಮಾರ್, ಆರ್.ಚೇತನ, ಎಂ.ಲಕ್ಷ್ಮ್ಮಿಕಾಂತ, ತಿಪ್ಪೇಸ್ವಾಮಿ, ಒ.ಟಿ.ತಿಪ್ಪೇಸ್ವಾಮಿ, ಕಲ್ಪನಾ, ಶಶಿಕಲಾ ಇತರರಿದ್ದರು.