

ಕೋಲಾರ: ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಗುರುವಾರದಿಂದ ಮಧ್ಯಾಹ್ನದ ಬಿಸಿಯೂಟ ಆರಂಭಗೊಂಡಿದ್ದು, ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಮತ್ತು ಸಿದ್ಧತೆಗಳ ಪರಿಶೀಲನೆ ನಡೆಸಿದರು. ಕರೊನಾ ಹಿನ್ನೆಲೆಯಲ್ಲಿ 16 ತಿಂಗಳಿಂದ ನಿಂತಿದ್ದ ಬಿಸಿಯೂಟಕ್ಕೆ ಮರು ಚಾಲನೆ ಸಿಕ್ಕಿರುವುದರಿಂದ ಅನ್ನಪೂರ್ಣ ಅಡುಗೆ ಕೋಣೆಯಲ್ಲಿ ಒಲೆ ಉರಿಯುವಂತಾಗಿ ಮಕ್ಕಳಿಗೆ ಅನ್ನದಾಸೋಹದ ಭಾಗ್ಯ ಸಿಕ್ಕಿದೆ.
ಬಿಸಿಯೂಟ ಆರಂಭದ ಮೊದಲ ದಿನವೇ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಅಡುಗೆ ಮನೆಯಲ್ಲಿ ಸ್ವಚ್ಛತೆ, ಕುಡಿಯಲು ಶುದ್ಧ ಬಿಸಿನೀರು, ಮೊದಲ ದಿನ ಸಿಹಿ ಊಟದ ಸಿದ್ಧತೆ ಪರಿಶೀಲಿಸಿ, ಅಡುಗೆ ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಂಡರು.
ತಾಲೂಕಿನ ನರಸಾಪುರ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ್ದ ಅವರು, ಅಡುಗೆ ಮನೆ ಪರಿಶೀಲಿಸಿದ ಸಂದರ್ಭದಲ್ಲಿ ಸ್ವಚ್ಛತೆಗೆ ಒತ್ತು ನೀಡುವ ಜತೆಗೆ ಮಕ್ಕಳನ್ನು ಅಡುಗೆ ಮನೆಗೆ ಬಿಡದಿರಿ ಎಂದು ಸೂಚಿಸಿದರು. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದನ್ನು ಖಾತ್ರಿ ಪಡೆಸಿಕೊಂಡರಲ್ಲದೆ ಪಾತ್ರೆ, ಪರಿಕರಗಳ ಸ್ವಚ್ಛತೆಗೆ ಅಗತ್ಯ ನೀರಿನ ಸಂಗ್ರಹಣೆ, ನಿರಂತರ ಬಿಸಿಯೂಟಕ್ಕಾಗಿ ನೀರು ಸರಬರಾಜು, ಸುರಕ್ಷಿತ ಕ್ರಮಗಳಲ್ಲಿ ನೀರಿನ ಸಂಗ್ರಹ ಮಾಡಿಟ್ಟುಕೊಳ್ಳುವಂತೆ ಅಡುಗೆ ಸಿಬ್ಬಂದಿಗೆ ಸೂಚನೆ ನೀಡಿದರು.
ಅಗ್ನಿ ಅನಾಹುತ ತಡೆಯಲು ಅಗ್ನಿ ನಂದಕಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು, ಶಾಲೆಯ ಶೌಚಗೃಹ ಸ್ವಚ್ಚವಾಗಿಟ್ಟುಕೊಳ್ಳುವುದು, ಕರೊನಾ ಹರಡದಂತೆ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲಿಸಿದರು.
ತೊರ‌್ನಹಳ್ಳಿ ರಮಾಮಾಧವ ಪ್ರೌಢಶಾಲೆ, ನರಸಾಪುರದ ಬಿಆರ್‌ಎಂವಿ ಶಾಲೆ, ನಗರದ ಸೆಂಟ್‌ಆನ್ಸ್ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಬಿಸಿಯೂಟ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿದರು.