

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ 151ನೇ ಯಾತ್ರಾ ಮಹೋತ್ಸವವು ಬುಧವಾರದಿಂದ ಆರಂಭವಾಗಿದ್ದು ಫೆ.27ರವರೆಗೆ ನಡೆಯಲಿದೆ. ಕರೊನಾ ಹಿನ್ನೆಲೆ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಫೆ.24ರವರೆಗೆ ನಿತ್ಯ ಸಂಜೆ 7 ಗಂಟೆಗೆ ಮನ್ನಿಜಗುಣರ ಅನುಭಾವ ಪ್ರವಚನ ನಡೆಯಲಿದೆ. ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಪ್ರವಚನ ನಡೆಸಿಕೊಡುವರು. ಸೋಮನಾಥ ಗವಾಯಿಗಳು ಮತ್ತು ನಾಗಭೂಷಣ ಹಿರೇಮಠ ಸಂಗೀತ ಸೇವೆ ಸಲ್ಲಿಸುವರು ಎಂದರು.
ಫೆ.21ರಂದು ಬೆಳಗ್ಗೆ 8:30ಕ್ಕೆ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವರು. 25ರಂದು ಬೆಳಗ್ಗೆ 7ಗಂಟೆಗೆ 8ನೇ ಪೀಠಾಧೀಶರ 95ನೇ ಪುಣ್ಯಸ್ಮರಣೋತ್ಸವ, ಶಿವದೀಕ್ಷಾ ಕಾರ್ಯಕ್ರಮಗಳು ಡಾ.ಸುಜ್ಞಾನದೇವ ಶಿವಾಚಾರ್ಯರ ಮತ್ತು ವೀರೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಜರುಗುವುದು. ಬೆಳಗ್ಗೆ 10 ಗಂಟೆಗೆ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ರಕ್ತದಾನ ಮತ್ತು ನೇತ್ರದಾನ ಶಿಬಿರ, ಮಧ್ಯಾಹ್ನ 12 ಗಂಟೆಗೆ 11ಸಾಮೂಹಿಕ ವಿವಾಹ ನಡೆಯಲಿವೆ. ಶಾಸಕ ರಾಮಣ್ಣ ಲಮಾಣಿ, ಜಿ.ಪಂ. ಅಧ್ಯಕ್ಷ ಈರಣ್ಣ ನಾಡಗೌಡ ಆಗಮಿಸುವರು. ಸಂಜೆ 5:30ಗಂಟೆಗೆ ಜಗದ್ಗುರು ಅನ್ನದಾನೀಶ್ವರ ಮಹಾರಥೋತ್ಸವ ನೆರವೇರಲಿದೆ. ಸಂಜೆ 6ಗಂಟೆಗೆ ಕೊಪ್ಪಳ ಗವಿಸಿದ್ಧೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.
ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಮಾತನಾಡಿ, ಫೆ.26ರಂದು ಬೆಳಗ್ಗೆ 10ಗಂಟೆಗೆ ಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರವನ್ನು ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗೆ ನೀಡಿ ಗೌರವಿಸಲಾಗುವುದು. ಎಂಎಲ್ಸಿ ಎಸ್.ವಿ. ಸಂಕನೂರ ಅವರು ಹೊಸ ಶಿಕ್ಷಣ ನೀತಿ ಕುರಿತು ಉಪನ್ಯಾಸ ನೀಡುವರು. ಡಾ.ಗುರುದೇವಿ ಹುಲೆಪ್ಪನವರಮಠ ಆಗಮಿಸುವರು. ಸಂಜೆ 4:30ಕ್ಕೆ ಜಂಗಮೋತ್ಸವ, ಸಂಜೆ 6 ಗಂಟೆಗೆ ಭಕ್ತರ ಹಿತಚಿಂತನ ಗೋಷ್ಠಿ ಡಾ.ಚೆನ್ನಮಲ್ಲ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳ ಸಾನ್ನಿಧ್ಯವನ್ನು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪವನ ಮೇಟಿ, ಆರ್.ಆರ್.ಹೆಗ್ಗಡಾಳ, ಕಾಂತರಾಜ ಹಿರೇಮಠ, ಭರಮಗೌಡ ನಾಡಗೌಡ್ರ, ಕುಮಾರ ಬನ್ನಿಕೊಪ್ಪ, ಧೃವ ಹೂಗಾರ ಇದ್ದರು.