ಅನ್ನದಾತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ

20arsph1ep
69ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ, ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಸೋಮನಹಳ್ಳಿ ನಾಗರಾಜು, ಪುಟ್ಟಸ್ವಾಮಿ, ಬಂಡಿಗೌಡರ ರಾಜಣ್ಣ ಇತರರಿದ್ದಾರೆ.
Published on

ಅರಸೀಕೆರೆ: ಸಹಕಾರ ಸಂಘಗಳ ನೆರವು ಪಡೆಯುವ ಮೂಲಕ ಅನ್ನದಾತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.

ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಅನ್ನದಾತನಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಜಿಲ್ಲಾ ಹಾಗೂ ನಗರ ವ್ಯಾಪ್ತಿಯ ಎಚ್‌ಡಿಸಿಸಿ ಬ್ಯಾಂಕ್‌ಗಳ ಮೂಲಕವೂ ನೆರವಿನ ಹಸ್ತ ಚಾಚಿದ್ದೇವೆ. ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದ್ದು ಅಗತ್ಯಕ್ಕೆ ತಕ್ಕಂತೆ ಹಾಲು ಉತ್ಪಾದಕರ ಸಂಘಗಳನ್ನು ಆರಂಭಿಸಿರುವುದು ಪ್ರಗತಿಯ ಸಂಕೇತವಾಗಿದೆ.

ಆರ್ಥಿಕ ಸೇರ್ಪಡೆ, ಆಧುನಿಕ ತಂತ್ರಜ್ಞಾನದ ಬಳಕೆ ಮೂಲಕ ದತ್ತಾಂಶ ಸಂಗ್ರಹ ಬಲಪಡಿಸುವ ನಿಟ್ಟಿನಲ್ಲಿ ದಿಟ್ಟ ನಿಲುವು ತೆಗೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ರೈತರು ಸಹಕಾರ ಸಂಘಗಳಲ್ಲಿ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಯಶಸ್ಸಿಗೆ ಕೈಜೋಡಿಸುವುದರ ಜತೆಗೆ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸಹಕಾರಿ ಕ್ಷೇತ್ರಗಳ ಪುನಶ್ಚೇತನಕ್ಕೆ ಎಚ್.ಡಿ.ರೇವಣ್ಣ ಹೆಚ್ಚಿನ ಕೊಡುಗೆ ನೀಡಿದ್ದಾರೆ. ನನ್ನ ಕ್ಷೇತ್ರ ವ್ಯಾಪ್ತಿಯ ಕೃಷಿಕರಿಗೆ ನೆರವು ನೀಡುವ ಉದ್ದೇಶದಿಂದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಅವರನ್ನು ಭೇಟಿ ಮಾಡಿ ಚರ್ಚಿಸಿ ಹೆಚ್ಚಿನ ಅನುದಾನ ಪಡೆಯುವ ನಿರೀಕ್ಷೆ ಹೊಂದಿದ್ದೇನೆ. ಆದರೆ ತಾಲೂಕಿನ ಒಂದೆರಡು ಸಂಘಗಳ ಕಾರ್ಯದರ್ಶಿಗಳು ನನಗೆ ಇನ್ನಿಲ್ಲದ ತೊಂದರೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಮಾತನಾಡಿದರು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಬಾಚೇನಹಳ್ಳಿ ಪುಟ್ಟಸ್ವಾಮಿ, ಉಪಾಧ್ಯಕ್ಷ ಬಂಡಿಗೌಡರ ರಾಜಣ್ಣ, ಎಚ್‌ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಕೆ.ಸೋಮೇಶ್, ಓಂಕಾರ ಮೂರ್ತಿ, ಸಹಕಾರ ಅಭಿವೃದ್ಧಿ ಅಧಿಕಾರಿ ದೇವರಾಜು, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಜಯಕುಮಾರ್, ಮುಖಂಡರಾದ ಹೊಸೂರು ಗಂಗಾಧರ್, ಬಾಣಾವರ ಅಶೋಕ್, ಚಿಕ್ಕಲ್ಕೂರು ಮುರುಳಿ, ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net