

ಹನೂರು: ರೈತರ ಸಮಸ್ಯೆಗಳು ಬಗೆಹರಿಯಬೇಕಾದರೆ ಪ್ರತಿ ಹಳ್ಳಿಯಲ್ಲೂ ಸಂಘಟನೆಯಾಗಬೇಕು. ರೈತರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ತಾಲೂಕಿನ ಅಜ್ಜೀಪುರ ಗ್ರಾಮದ ವನ್ನಿಕುಲ ಕ್ಷತ್ರೀಯ ಸಮುದಾಯ ಭವನದಲ್ಲಿ ಭಾನುವಾರ ರೈತ ಸಂಘದ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಹಾಗೂ ಗ್ರಾಮ ಘಟಕಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ರೈತ ದೇಶದ ಬೆನ್ನೆಲುಬು ಎಂದು ರಾಜಕೀಯ ವ್ಯಕ್ತಿಗಳು ಭಾಷಣಗಳಲ್ಲಿ ಹೇಳುತ್ತಾರೆ. ಆದರೆ ಸರ್ಕಾರದಿಂದ ಸಮರ್ಪಕವಾಗಿ ಸವಲತ್ತುಗಳು ಸಿಗುತ್ತಿಲ್ಲ. ಇದರಿಂದ ರೈತರು ಕೃಷಿಯಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಹಾಗೆಯೇ ಗ್ರಾಮಗಳಲ್ಲೂ ಮೂಲ ಸೌಕರ್ಯಗಳ ಕೊರತೆ ಇದ್ದರೂ ದೊರಕಿಸಿ ಕೊಡುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ದೆಸೆಯಲ್ಲಿ ರೈತ ಸಂಘಟನೆ ಹೋರಾಟದ ಫಲವಾಗಿ ವಿದ್ಯುತ್ ಕಾಣದ ಹಳ್ಳಿಗಳಿಗೆ ಬೆಳಕು ಕೊಡಿಸಿದೆ. ಕುಡಿಯುವ ನೀರು, ಸ್ಮಶಾನ ಹಾಗೂ ಇನ್ನಿತರ ಸೌಕರ್ಯಒದಗಿಸಿ ಕೊಟ್ಟಿದೆ. ಜನಪ್ರತಿನಿಧಿಗಳು ಮಾಡದ ಕೆಲಸವನ್ನು ರೈತ ಸಂಘಟನೆ ಮಾಡಿದ್ದು, ಅನುಕೂಲ ಕಲ್ಪಿಸಿದೆ. ಹಾಗಾಗಿ ರೈತ ಸಂಘಟನೆಗೆ ವಿಶೇಷ ಶಕ್ತಿ ಇದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಸಂಘಟಿತರಾಗಬೇಕು. ಪ್ರಶ್ನಿಸುವ ಹಾಗೂ ಹೋರಾಟದ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಈ ದೆಸೆಯಲ್ಲಿ ಹನೂರು ಭಾಗದ ಪ್ರತಿ ಹಳ್ಳಿಯಲ್ಲೂ ಸಂಘಟನೆಯಾಗಬೇಕಿದೆ ಸದಸ್ಯರು ಹಾಗೂ ಪದಾಧಿಕಾರಿಗಳು ಜವಾಬ್ದಾರಿಯನ್ನು ಅರಿಯಬೇಕಿದೆ ಎಂದರು.
ಇದೇ ವೇಳೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಅನುಸರಿಸಬೇಕಾದ ಜವಬ್ದಾರಿಯ ಬಗ್ಗೆ ತಿಳಿಸಿ ಕೊಡಲಾಯಿತಲ್ಲದೆ, ಹನೂರು ಭಾಗದ ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯ, ಜಲಾಶಯಗಳಿಗೆ ನೀರು ತುಂಬಿಸುವುದು, ನೀರಾವರಿ ಯೋಜನೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಆಗಬೇಕಿರುವ ಇನ್ನಿತರ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಪೇಗೌಡ, ಕಾರ್ಯದರ್ಶಿ ಮಹೇಶ್‌ಬಾಬು, ರಾಜ್ಯ ಸಮಿತಿ ಕಾಯಂ ಸದಸ್ಯ ಮಹೇಶ್‌ಕುಮಾರ್, ಜಿಲ್ಲಾಧ್ಯಕ್ಷ ಮಹದೇವಪ್ಪ, ಉಪಾಧ್ಯಕ್ಷ ಗೌಡೇಗೌಡ, ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಪೂಂಗುಡಿ, ತಾಲೂಕು ರೈತ ಸಂಘದ ಮಹಿಳಾಧ್ಯಕ್ಷೆ ರಾಜಮಣಿ, ಪದಾಧಿಕಾರಿಗಳಾದ ಕೂಡಲೂರು ವೆಂಕಟಾಚಲ, ಪಳನಿಸ್ವಾಮಿ ಇತರರು ಇದ್ದರು.