

ಕೊಡೇಕಲ್: ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂಬ ಕವಿವಾಣಿ ಎಂದಿಗೂ ಸುಳ್ಳಲ್ಲ. ದೇಶದ ಜನತೆಯ ಹಸಿವನ್ನು ನೀಗಿಸುವ ಅನ್ನದಾತರು ಈ ದೇಶದ ನಿಜವಾದ ಸಂಪತ್ತಾಗಿದ್ದಾರೆ ಎಂದು ಶ್ರೀ ಗುರು ದುರದುಂಡೇಶ್ವರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ಗ್ರಾಮದ ರೈತ ಮಲ್ಲಣ್ಣ ಆರಲಗಡ್ಡಿ ಅವರ ಜಮೀನಿನಲ್ಲಿ ಮಂಗಳವಾರ ಹಮ್ಮಿಕೊಂಡ ಕೃಷಿ ವಿಚಾರ ಸಂಕಿರಣ ಹಾಗೂ ನಾಗದೇವತೆ ಪೂಜಾ ಕರ‍್ಯಕ್ರಮದಲ್ಲಿ ಆಶೀರ್ವಚನ ನೀಡಿದ ವರು, ಗಡಿ ಕಾಯುತ್ತಾ ನಮ್ಮ ರಕ್ಷಣೆ ಮಾಡುತ್ತಿರುವ ಸೈನಿಕರು, ದೇಶದ ಜನರ ಹಸಿವು ನೀಗಿಸುವ ಅನ್ನದಾತರನ್ನು ನಾವು ಎಂದಿಗೂ ಮರೆಯಬಾರದು.
ವರ್ಷವಿಡಿ ಮಳೆ, ಚಳಿ, ಬಿಸಿಲೆನ್ನದೆ ಹೊಲದಲ್ಲಿ ದುಡಿಯುವ ಅನ್ನದಾತರು ಅನುಭವಿಸುವ ಕಷ್ಟಗಳು ನೂರಾರು, ಮಳೆ ಬರದಿದ್ದರೂ ತೊಂದರೆ, ಅತಿಯಾದ ಮಳೆ ಬಂದರೂ ತೊಂದರೆ ಅನುಭವಿಸುವ ರೈತರನ್ನು ಕೀಳಾಗಿ ನೋಡುವುದು ಸರಿಯಲ್ಲ. ನಾವು ರೈತರನ್ನು ಗೌರವದಿಂದ ಕಾಣುವ ಮನೋಭಾವ ರೂಢಿಸಿಕೊಳ್ಳಬೆಕು ಎಂದು ಸಲಹೆ ನೀಡಿದರು.
ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ವಿಜಯಕುಮಾರ ಪಲ್ಯೆ ಮಾತನಾಡಿದರು. ಬಸವಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ, ಕೃಷಿ ಅಧಿಕಾರಿ ರಾಮನಗೌಡ ಮಾಲಿಪಾಟೀಲ್, ಸಂಗಪ್ಪ ಶಿವಪುರ, ಅಯ್ಯಪ್ಪ ಪಡಶೆಟ್ಟಿ, ಮಲ್ಲಣ್ಣ ಆರಲಗಡ್ಡಿ, ಸುಭಾಷ್, ಗುರಣ್ಣ ಧನ್ನೂರ, ಸಂಗನಗೌಡ ಪೊಲೀಸ್ ಪಾಟೀಲ್, ವಿಜಯಕುಮಾರ ಮದರಿ ಇತರರಿದ್ದರು.
ಮಲ್ಲಣ್ಣ ಸ್ವಾಗತಿಸಿದರು. ಗುಂಡಣ್ಣ ನಗನೂರ ವಂದಿಸಿದರು. ಸಂಗಮೇಶ ಪಾಟೀಲ್ ನಿರೂಪಿಸಿದರು. ಈ ವೇಳೆ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಅಲ್ಲದೆ ನಾಗದೇವರೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.