ಅನ್ನದಾತರ ಹೈರಾಣ ತಪ್ಪಿಸಿದ ಗಾಣ

Gana
Published on

ರಮೇಶ ಮೇಳಕುಂದಾ ಕಲಬುರಗಿ: ಕರೊನಾ ಲಾಕ್ಡೌನ್ನಿಂದಾಗಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡು ಕಷ್ಟಪಟ್ಟು ಬೆಳೆದ ಕಬ್ಬು ಕಣ್ಣೆದುರೇ ಒಣಗುತ್ತಿರುವುದನ್ನು ಕಂಡು ದಿಕ್ಕುತೋಚದಂತಾದ ರೈತರ ಮಧ್ಯೆಯೇ ಖಣದಾಳ ಗ್ರಾಮದ ಬೆಳಗಾರರೊಬ್ಬರು ಗಾಣದ ಮೂಲಕ ಬೆಲ್ಲ ತಯಾರಿಕೆ ಆರಂಭಿಸುವ ಮೂಲಕ ಸಂಕಷ್ಟದಿಂದ ಹೊರಬರುವ ಹಾದಿ ಕಂಡುಕೊಂಡಿದ್ದಾರೆ.
ರಮೇಶ ನಾಟೀಕಾರ ಅವರೇ ಸಾಂಪ್ರದಾಯಿಕ ಪದ್ಧತಿಗೆ ಸೈ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟವರು. ಅಲ್ಲದೆ ಇತರ ಕೃಷಿಕರಿಗೂ ಪರ್ಯಾಯ ಹಾದಿ ತೋರಿಸಿಕೊಟ್ಟಿದ್ದು ಮಾದರಿ ಎನಿಸಿದೆ.
ಸಕ್ಕರೆ ಕಾರ್ಖಾನೆಗೆ ಕಬ್ಬು ಕಳುಹಿಸಲು ಕಟಾವು ಆರಂಭಿಸುವ ಹೊತ್ತಲ್ಲೇ ಲಾಕ್ಡೌನ್ ಘೋಷಣೆಯಾಗಿ ಕಾರ್ಖಾನೆಗಳು ಬಂದ್ ಆದವು. ಕೈಗೆ ಬಂದ ಬೆಳೆ ಹೊಲದಲ್ಲೇ ಒಣಗುವ ಆತಂಕ ರಮೇಶ ಅವರನ್ನು ಕಾಡಿತು. ಏನು ಮಾಡೋದು ಎಂಬ ಚಿಂತೆಯಲ್ಲಿದ್ದಾಗ ಕೃಷಿ ಅಧಿಕಾರಿಗಳ ಸಲಹೆ ಮತ್ತು ಸಹಕಾರದೊಂದಿಗೆ ಗಾಣದ ಬೆಲ್ಲ ತಯಾರಿಸಲು ಶುರುವಿಟ್ಟಿದ್ದಾರೆ.
ಐದು ವರ್ಷದಿಂದ ಕಬ್ಬಿನ ಗಾಣವನ್ನು ಕೈಬಿಟ್ಟಿದ್ದ ರಮೇಶ ಇದೀಗ ಸಕ್ಕರೆ ಕಾರ್ಖಾನೆ ಬಂದ್ ಆಗಿದ್ದರಿಂದ ಅನಿವಾರ್ಯವಾಗಿ ಪೂರ್ವಜರು ಹಾಕಿಕೊಟ್ಟ ಪದ್ಧತಿಗೆ ಮೊರೆ ಹೋಗಿ ಸುಟ್ಟು ಹಾಕಬೇಕು ಎಂದಿದ್ದ ಬೆಳೆಯಿಂದಲೇ ಲಾಭ ಮಾಡಿಕೊಳ್ಳುತ್ತಿದ್ದಾರೆ.
ದಿನಕ್ಕೆ ನಾಲ್ಕೈದು ಕ್ವಿಂಟಾಲ್ ಉತ್ಪಾದನೆ: ರಮೇಶ 6 ಎಕರೆ ಕಬ್ಬು ಬೆಳೆದಿದ್ದು, ಗಾಣದ ಮೂಲಕ ಐದು ಕ್ವಿಂಟಾಲ್ ಬೆಲ್ಲದ ಗಟ್ಟುಗಳನ್ನು ತಯಾರಿಸುತ್ತಿದ್ದಾರೆ. ಇವರ ಗಾಣ ಮುಗಿದ ನಂತರ ಊರಿನ, ಪಕ್ಕದ ಗ್ರಾಮದ ರೈತರು ಇಲ್ಲಿಯೇ ಗಾಣ ಮಾಡಿಕೊಂಡು ಹೋಗಬಹುದು ಎನ್ನುತ್ತಾರೆ ರಮೇಶ ನಾಟೀಕಾರ.
ರಮೇಶ ಹಾದಿಯಲ್ಲೇ ರೈತ ಬಸವರಾಜ ಪಾಟೀಲ್ ಸಹ ತಮ್ಮ ಹಳೇ ಗಾಣವನ್ನು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಬೆಲ್ಲ ತಯಾರಿಕೆಗೆ ಚಾಲನೆ ನೀಡಲಿರುವುದು ಒಳ್ಳೆಯ ವಿಚಾರ.

ಕಾರ್ಮಿಕರ ಸಮಸ್ಯೆ ನೀಗಿಸಿದ ಯಂತ್ರ
ಗಾಣದ ವೇಳೆ ಕಡಾಯಿ ಎತ್ತುವುದಕ್ಕಾಗಿಯೇ 12ರಿಂದ 14 ಜನ ಬೇಕಾಗುತ್ತಿತ್ತು. ಆದರೀಗ ಕಡಾಯಿ ಎತ್ತಲು ರೈಲ್ವೆ ಹಳಿ ಮಾದರಿಯಲ್ಲಿ ಗೇರ್ ಮೂಲಕ ನಿಯಂತ್ರಿಸುವ ಯಂತ್ರ ಅಳವಡಿಸಿದ್ದು, ಅರ್ಧದಷ್ಟು ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ.

ಕೃಷಿ ಅಧಿಕಾರಿಗಳ ಸಹಕಾರ, ಸಲಹೆಯಿಂದ ಗಾಣ ಆರಂಭಿಸಿದ್ದೇವೆ. ಸದ್ಯ ಮಾರುಕಟ್ಟೆ ಇಲ್ಲದಿದ್ದರೂ ಮುಂದೆಯಾದರೂ ದೊರೆಯುವ ಭರವಸೆ ಇದೆ. ಗಾಣ ಮಾಡದಿದ್ದರೆ ಕಬ್ಬು ಸುಡಬೇಕಾಗುತ್ತಿತ್ತು. ಇದೀಗ ಒಂದಿಷ್ಟು ಲಾಭ ಕೈ ಸೇರುವ ಆಶಯವಿದೆ.
| ರಮೇಶ ನಾಟೀಕಾರ
ಕಬ್ಬು ಬೆಳೆಗಾರ

ರಮೇಶ ನಾಟೀಕಾರ ಅವರಿಗೆ ಕಬ್ಬು ಅರಿಯುವ ಮಷಿನ್ ನೀಡಿದ್ದು, ಇದೀಗ ಬಳಕೆ ಬರುತ್ತಿದೆ. ಕಾರ್ಮಿಕರ ಸಮಸ್ಯೆ ನೀಗಿಸಲು ಸೂಕ್ತ ತಂತ್ರಜ್ಞಾನ ಸೂಚಿಸಲಾಗಿದೆ. ಗಾಣದ ವೇಳೆ ಕರೊನಾ ಮುಂಜಾಗ್ರತೆ ವಹಿಸುವ ಕುರಿತು ಜಾಗೃತಿ ಮೂಡಿಸಲಾಗಿದೆ. ಬೇರೆ ಊರಿನಿಂದ ಬಂದವರ ಮೇಲೆ ನಿಗಾ ಇಡಲು ಸಲಹೆ ನೀಡಿದ್ದೇವೆ. ರೈತರು ಕಬ್ಬು ಸುಡದೆ ಬೆಲ್ಲ ತಯಾರಿಸಿ ಲಾಭ ಪಡೆಯಬಹುದು.
| ಚಂದ್ರಕಾಂತ ಜೀವಣಗಿ
ಸಹಾಯಕ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net