ಅನ್ನದಾತ ಬದುಕಿದರೆ ದೇಶದ ಉಳಿವು

6Athani10
Published on

ಅಥಣಿ: ಕಬ್ಬು ಬೆಳೆಗಾರರ ಹೋರಾಟ ನ್ಯಾಯಸಮ್ಮತವಾಗಿದೆ. ಅನ್ನದಾತ ಬದುಕಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಹಾಗಾಗಿ, ಸರ್ಕಾರ ಕಬ್ಬಿಗೆ ಯೋಗ್ಯ ಬೆಲೆ ನೀಡಬೇಕು ಎಂದು ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಒತ್ತಾಯಿಸಿದರು.

ಪಟ್ಟಣದ ಶಿವಯೋಗಿ ವೃತ್ತದಲ್ಲಿ ರೈತರು ಹಮ್ಮಿಕೊಂಡಿದ್ದ ಹೋರಾಟದಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿ, ಸರ್ಕಾರ ರೈತರ ಶ್ರಮ, ಖರ್ಚು ಹಾಗೂ ಉತ್ಪಾದನಾ ವೆಚ್ಚಗಳನ್ನು ಪರಿಗಣಿಸಿ ನ್ಯಾಯಸಮ್ಮತವಾದ 3,500 ರೂ. ಬೆಲೆ ನೀಡಬೇಕು. ಈ ಹೋರಾಟ ಕೇವಲ ಬೆಲೆಯ ವಿಚಾರವಲ್ಲ. ಇದು ರೈತರ ಬದುಕಿನ ಹೋರಾಟವಾಗಿದೆ.

ದೇಶದ ಅರ್ಥವ್ಯವಸ್ಥೆಯಲ್ಲಿ ರೈತರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಿ, ಕಬ್ಬು ಬೆಲೆ, ಪಾವತಿ ಸಮಯ ಮತ್ತು ಕಾರ್ಖಾನೆ ನೀತಿ ಕುರಿತು ಶಾಶ್ವತ ಪರಿಹಾರ ಒದಗಿಸಬೇಕು ಎಂದರು.

ಅಥಣಿ ತಾಲೂಕು ಬಂದ್ 3ನೇ ದಿನವೂ ಮುಂದುವರಿದಿದೆ. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತ, ಶಿವಯೋಗಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ಶಿವಾಜಿ ಸರ್ಕಲ್ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾಜ್ಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯ ರೈತಸಂಘದ ಅಧ್ಯಕ್ಷ ಮಹಾದೇವ ಮಡಿವಾಳ, ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ, ಕರವೇ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net