

ಬೇಲೂರು: ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸುವ ಪ್ರವಾಸಿಗರ ಹಾಗೂ ಭಕ್ತರ ಅನುಕೂಲಕ್ಕಾಗಿ ಸಂಜೆ ಸಮಯದಲ್ಲೂ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲು ದೇಗುಲ ವ್ಯವಸ್ಥಾಪನ ಸಮಿತಿ ಅಡ್ಡಿಪಡಿಸುತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಕಾರ್ಯಧ್ಯಕ್ಷ ಅರುಣ್ ಕುಮಾರ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೇಲೂರು ಚೆನ್ನಕೇಶವ ದೇಗುಲದಲ್ಲಿ ಕಳೆದ ಸಾಕಷ್ಟು ವರ್ಷಗಳಿಂದ ಭಕ್ತರು, ಪ್ರವಾಸಿಗರಿಗೆ ಮಧ್ಯಾಹ್ನ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಅದೇ ರೀತಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲೂ ಅನ್ನ ದಾಸೋಹ ವ್ಯವಸ್ಥೆ ಮಾಡಿದರೆ ಪ್ರತಿನಿತ್ಯ ಬೇಲೂರಿಗೆ ಆಗಮಿಸುವವರಿಗೆ ಅನುಕೂಲವಾಗುತ್ತದೆ. ದಾಸೋಹಕ್ಕೆ ದಾನಿಗಳು ಮುಂದೆ ಬಂದರೂ, ದೇಗುಲ ವ್ಯವಸ್ಥಾಪನ ಸಮಿತಿಯ ಕೆಲ ಸದಸ್ಯರು ಅಡ್ಡಿಪಡಿಸುತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ದೇಗುಲಗಳಲ್ಲಿ ನಿತ್ಯ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅದೇ ರೀತಿಯಲ್ಲಿ ಬೇಲೂರಿನ ಶ್ರೀಚನ್ನಕೆಶವಸ್ವಾಮಿ ದೇಗುಲದಲ್ಲೂ ದಾಸೋಹ ವ್ಯವಸ್ಥೆ ಮಾಡಿದರೆ ಎಲ್ಲರಿಗೂ ಉಪಯೋಗವಾಗುತ್ತದೆ. ಇಂತಹ ಮಹತ್ಕಾರ್ಯಕ್ಕೆ ಸದಸ್ಯರೇ ಅಡ್ಡಿ ಪಡಿಸುವುದು ಸರಿಯಲ್ಲ. ಶಾಸಕರು, ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಭಕ್ತರ ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಸಂಜೆ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ನಿಂಗರಾಜು ಮಾತನಾಡಿ, ಪ್ರತಿನಿತ್ಯ ದೇವರ ದರ್ಶ ಹಾಗೂ ದೇವಾಲಯ ವೀಕ್ಷಣೆಗೆ ಬರುವ ಪ್ರತಿಯೊಬ್ಬರಿಗೂ ಸಂಜೆ ಸಮಯದಲ್ಲಿ ಅನ್ನ ದಾಸೋಹ ವ್ಯವಸ್ಥೆ ಮಾಡಲು ವ್ಯವಸ್ಥಾಪನ ಸಮಿತಿ ಮುಂದಾದರೆ. ಕೆಲ ಸದಸ್ಯರೆ ವಿರೋಧ ಮಾಡುತ್ತಿರುವುದರಿಂದ ಅದು ನೆನೆ ಗುದಿಗೆ ಬೀಳುವಂತ್ತಾಗಿದೆ. ಹೀಗಾದರೆ ಸಂಜೆಯ ಸಮಯದಲ್ಲಿ ಬೇಲೂರಿಗೆ ಬರುವ ಪ್ರವಾಸಿಗರು ಹಾಗೂ ಭಕ್ತರು ಹೆಚ್ಚಿನ ಹಣ್ಣ ಕೊಟ್ಟು ಹೋಟೆಲ್‌ಗಳಲ್ಲಿ ಊಟ ಮಾಡುವಂತ್ತಾಗಿದೆ. ತಕ್ಷಣವೇ ಸಮಿತಿ ಸದಸ್ಯರೆಲ್ಲ ಸೇರಿ ಸಂಜೆ ಅನ್ನ ದಾಸೋಹ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದರು.